Lassi: ಲಸ್ಸಿ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ?

ಭಾರತದ ಪ್ರತಿಯೊಂದು ಭಾಗದಲ್ಲೂ ವಿಭಿನ್ನ ಆಹಾರ ಪದ್ಧತಿಯಿದೆ. ಆದರೆ ಈಗ ಎಲ್ಲಾ ಆಹಾರಗಳು ಪ್ರತಿಯೊಂದು ಕಡೆ ಸಿಗುತ್ತಿರುವುದು ವಿಶೇಷ. ಅದರಲ್ಲೊಂದು ಲಸ್ಸಿ. 

ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಹೆಜ್ಜೆ ಹೆಜ್ಜೆಗೂ ಲಸ್ಸಿ ಬಾರ್​ಗಳು ಕಾಣಿಸಿಕೊಳ್ಳುತ್ತಿವೆ. ಬಾಯಿ ರುಚಿ ಹೆಚ್ಚಿಸುವ ಈ ಪಾನೀಯ ಕುಡಿಯುವುದರಿಂದ ಆರೋಗ್ಯಕ್ಕೂ ಅಷ್ಟೇ ಪ್ರಯೋಜನವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಇದೀಗ ಬೇಸಿಗೆಯ ಬೇಗೆಯಿಂದ ದಣಿಯುವವರೇ ಹೆಚ್ಚು. ಹಾಗಿದ್ರೆ ನಿಮ್ಮ ಮೊದಲ ಆದ್ಯತೆ ಲಸ್ಸಿ ಕುಡಿಯುವುದಾಗಿರಲಿ. ಏಕೆಂದರೆ ಲಸ್ಸಿಯಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಅಂಶಗಳಿರುತ್ತವೆ. 

ಮೊಸರಿನಿಂದ ತಯಾರಿಸುವ ಲಸ್ಸಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸಮತೋಲನದಿಂದ ಕೂಡಿರುತ್ತದೆ. ಜೀರ್ಣಾಂಗ ವ್ಯವಸ್ಥೆ ತಂಪಾಗುವುದರಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳು ಸಹ ದೂರವಾಗುತ್ತವೆ.

ಲಸ್ಸಿ ಸ್ನಾಯುಗಳ ಬೆಳವಣಿಗೆಗೆ ಪೂರಕ. ಅಂದರೆ ಲಸ್ಸಿ ಕುಡಿಯುವುದರಿಂದ ಅಯಾಸ ನಿವಾರಣೆಯಾಗುವುದರ ಜೊತೆ ಸ್ನಾಯುಗಳನ್ನು ಬಲಗೊಳಿಸಬಹುದು.!

ಇನ್ನು ಲಸ್ಸಿಯಲ್ಲಿರುವ ಎಲೆಕ್ಟ್ರೋಲೈಟ್ ಹಾಗೂ ನೀರಿನ ಪ್ರಮಾಣ ದೇಹವನ್ನು ತೇವಾಂಶದಿಂದ ಕೂಡಿರಲು ಸಹಾಯವಾಗುತ್ತದೆ. ಅಂದರೆ ಲಸ್ಸಿ ಸೇವನೆಯು ದೇಹದ ಉಷ್ಣತೆಯನ್ನು ನಿಯಂತ್ರಿಸಿ, ದೇಹದ ಶಾಖವನ್ನು ಸಮತೋಲನದಲ್ಲಿರಿಸುತ್ತದೆ.

ಖಾರದ ಸೇವನೆಯಿಂದ ಕಾಣಿಸಿಕೊಳ್ಳುವ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಎದೆ ಉರಿಯನ್ನು ಲಸ್ಸಿ ಸೇವನೆಯಿಂದ ಹೋಗಲಾಡಿಸಬಹುದು. ಎಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ ಲಸ್ಸಿ ಸೇವನೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಲಸ್ಸಿಯಲ್ಲಿ ಲ್ಯಾಕ್ಟಿನ್ ಅಂಶ ಹಾಗೂ ವಿಟಮಿನ್ ಡಿ ಅಂಶಗಳಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಲಸ್ಸಿಯಲ್ಲಿ ಜೀರ್ಣಾಂಗ ಸ್ನೇಹಿಯಾಗಿರುವ ಬ್ಯಾಕ್ಟೀರಿಯಾಗಳಿರುತ್ತವೆ. ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಗೆ ತುಂಬಾ ನೆರವಾಗುವುದು. ಅಂದರೆ ಎಲ್ಲಾ ರೀತಿಯ ಜೀರ್ಣಕ್ರಿಯೆ ಸಮಸ್ಯೆಯಿಂದ ಪಾರಾಗಬಹುದಾಗಿದೆ.