'ಕಿಚ್ಚ' ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹು ಮುಖ ಹಾಗೂ ಬಹು ಭಾಷಾ ಪ್ರತಿಭೆ. ಇವರು ಸಂಜೀವ್ ಮಂಜಪ್ಪ ಮತ್ತು ಸರೋಜಾ ದಂಪತಿಗಳ ಮಗನಾಗಿ 2 ಸೆಪ್ಟೆಂಬರ್ 1973 ರಲ್ಲಿ ಜನಿಸಿದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ 'ಪ್ರೇಮದ ಕಾದಂಬರಿ' ಮೂಲಕ ಕಿರುತೆರೆಗೆ ಸುದೀಪ್ ಪಾದಾರ್ಪಣೆ ಮಾಡಿದರು. 'ತಾಯವ್ವ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸುದೀಪ್ ಪ್ರವೇಶಿಸಿದರು. ತದನಂತರ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸ್ಪರ್ಶ(1999) ಚಿತ್ರಕ್ಕಾಗಿ ಬಣ್ಣ ಹಚ್ಚಿದರು. 2001 ರಲ್ಲಿ ತೆರೆಗೆ ಬಂದ 'ಹುಚ್ಚ' ಸಿನಿಮಾ ಸುದೀಪ್ ಗೆ ಬಿಗ್ ಬ್ರೇಕ್ ನೀಡಿತು. ಇದಾದ ಬಳಿಕ ಕಿಚ್ಚ ಸುದೀಪ್ ಹಿಂದೆ ತಿರುಗಿ ನೋಡಲೇ ಇಲ್ಲ. ಕರ್ನಾಟಕ ಅಷ್ಟೆ ಅಲ್ಲದೇ, ಬೇರೆ ರಾಜ್ಯ ಹಾಗೂ ಬೇರೆ ದೇಶಗಳಲ್ಲಿ ಕಿಚ್ಚ ಸುದೀಪ್ಗೆ ಅಭಿಮಾನಿಗಳಿದ್ದಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' (Eega) ಸಿನಿಮಾ ಮೂಲಕ ತೆಲುಗಿನಲ್ಲೂ ಮನೆಮಾತಾದರು. ಸಲ್ಮಾನ್ ಖಾನ್ ಜೊತೆಗೆ ದಬಂಗ್ ಮೂರನೇ ಭಾಗದಲ್ಲಿ (Dabangg 3) ವಿಲನ್ ಪಾತ್ರದಲ್ಲಿ ನಟಿಸಿ ಬಾಲಿವುಡ್ ಗೂ ಕಾಲಿಟ್ಟಿದ್ದಾರೆ ಕಿಚ್ಚ ಸುದೀಪ್. ಸ್ವಾತಿಮುತ್ತು, #73 ಶಾಂತಿನಿವಾಸ ಮುಂತಾದ ಚಿತ್ರಗಳ ನಿರ್ದೇಶಕರು ಕೂಡಾ ಹೌದು.