

ಪ್ರಪಂಚವು ಜಾಗತೀಕರಣದ ನಾಗಲೋಟದಲ್ಲಿದೆ. ಆದರೆ ಕೆಲವು ದೇಶಗಳ ಸಂಪ್ರದಾಯ- ಸಂಸ್ಕೃತಿ ಕೇಳಿದರೆ ಬೆಚ್ಚಿ ಬೀಳಿಸುತ್ತದೆ. ಅಂತಹದೊಂದು ಸಂಪ್ರದಾಯವನ್ನು ಆಫ್ರಿಕಾ ಖಂಡದ ಮಸಾಯಿ ಬುಡಕಟ್ಟು ಜನಾಂಗ ಪಾಲಿಸಿಕೊಂಡು ಬರುತ್ತಿದೆ. ತಾಂಜಾನಿಯಾ ಮತ್ತು ಕೀನ್ಯಾ ದೇಶಗಳ ಕಾಡುಗಳ ಭಾಗದಲ್ಲಿ ಮಸಾಯಿ ಜನರು ಹೆಚ್ಚಾಗಿ ಕಂಡು ಬರುತ್ತಾರೆ.


ಮಸಾಯ್ ಮಾರಾ, ಸೆರೆಂಗಟಿ ಮತ್ತು ಅಂಬೊಸೇಲಿ ಮೀಸಲು ಅರಣ್ಯ ಪ್ರದೇಶದಲ್ಲಿ ವಾಸಿಸುವ ಇವರು ಕುರಿಗಾರಿಕೆ ಮತ್ತು ಬೇಟೆಯನ್ನು ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ಕೀನ್ಯಾ ಮತ್ತು ತಾಂಜಾನಿಯಾಗಳ ನಿವಾಸಿಗಳಾಗಿರುವ ಇವರ ಒಟ್ಟು ಜನಸಂಖ್ಯೆ 10 ಲಕ್ಷದಷ್ಟಿದೆ.


ಆದರೆ ಇವರು ಯಾವುದೇ ಸರ್ಕಾರಿ ನಿಯಮಗಳನ್ನು ಮತ್ತು ಕಾನೂನುಗಳನ್ನು ಪಾಲಿಸುವುದಿಲ್ಲ. ತಮ್ಮದೆಯಾದ ನಾಯಕನನ್ನು ಹೊಂದಿರುವ ಈ ಬುಡಕಟ್ಟು ಜನಾಂಗದಲ್ಲಿ ಇವರದೇ ಆದ ಕಾನೂನು ನಿಯಮಗಳಿವೆ. ಮಸಾಯಿ ಸಮುದಾಯದ ಹಿರಿಯ ವ್ಯಕ್ತಿ ಹೇಳಿದ ಮಾತೇ ಇಲ್ಲಿ ಕೋರ್ಟ್ ತೀರ್ಪು.


ಮಸಾಯಿ ಜನರು ಕೆಂಪು ಬಣ್ಣ ಒಳಗೊಂಡಿರುವ ಉಡುಪುಗಳನ್ನು ಮಾತ್ರ ಧರಿಸುತ್ತಾರೆ. ಶೂಕಾ ಎಂದು ಕರೆಯಲ್ಪಡುವ ಈ ವಸ್ತ್ರವು ಇವರ ಗುರುತಿನ ಭಾಗವಾಗಿದೆ. ಉತ್ತಮ ದೇಹದಾರ್ಢ್ಯವನ್ನು ಹೊಂದಿರುವ ಮಸಾಯಿಗಳು ಬೇಟೆಯಾಡುವುದರಲ್ಲಿ ನಿಸ್ಸೀಮರು.


ಅಚ್ಚರಿಯ ವಿಷಯವೆಂದರೆ ಇವರು ಸತ್ತ ಬಳಿಕ ದೇಹವನ್ನು ಹೂಳುವುದಿಲ್ಲ ಅಥವಾ ಸುಡುವುದಿಲ್ಲ. ಬದಲಾಗಿ ದೇಹವನ್ನು ಬಯಲು ಪ್ರದೇಶದಲ್ಲಿಡುತ್ತಾರೆ. ದೇಹ ಹೂಳಿದರೆ ಮಣ್ಣು ಹಾಳಾಗುತ್ತದೆ ಎಂದು ಈಗಲೂ ನಂಬಲಾಗುತ್ತಿದೆ.


ಮಸಾಯಿ ಜನರು ಅಪರಿಚಿತರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ. ಹಾಗೆಯೇ ಮಾಂಸಪ್ರಿಯರಾಗಿರುವ ಇವರು ಪ್ರಾಣಿಗಳನ್ನೂ ಸಾಕುತ್ತಾರೆ. ಪ್ರಾಣಿಗಳ ಸಂಖ್ಯೆ ಮತ್ತು ಮಕ್ಕಳ ಸಂಖ್ಯೆ ಆಧರಿಸಿ ಇವರ ಸಂಪತ್ತನ್ನು ನಿರ್ಧರಿಸಲಾಗುತ್ತದೆ.


ಇವರ ಆಹಾರಗಳಲ್ಲಿ ಸಾಮಾನ್ಯವಾಗಿ ಹಾಲು ಮತ್ತು ಮಾಂಸವಲ್ಲದೆ ಪ್ರಾಣಿಗಳ ರಕ್ತವನ್ನು ಬಳಸಲಾಗುತ್ತದೆ. ಅಲ್ಲದೆ ವಿಶೇಷ ಸಂದರ್ಭದಲ್ಲಿ ಜೀವಂತ ಪ್ರಾಣಿಗಳ ರಕ್ತ ಕುಡಿಯುವ ಸಂಪ್ರದಾಯ ಕೂಡ ಚಾಲ್ತಿಯಲ್ಲಿದೆ.


ರಕ್ತ ಕುಡಿಯುವುದರಿಂದ ದೇಹ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಮಸಾಯಿಗಳು ನಂಬುತ್ತಾರೆ. ಸಾಮಾನ್ಯವಾಗಿ ಇವರು ಎರಡು ರೀತಿಯಾಗಿ ಪ್ರಾಣಿಗಳ ರಕ್ತಹೀರುತ್ತಾರೆ. ಮೊದಲ ವಿಧಾನವೆಂದರೆ ಪ್ರಾಣಿಗಳಿಗೆ ಬಾಣಗಳಿಂದ ಚುಚ್ಚಿ ರಕ್ತ ತೆಗೆದು ಕುಡಿಯುತ್ತಾರೆ. ಮತ್ತೊಂದು ವಿಧಾನದಲ್ಲಿ ಪ್ರಾಣಿಗಳ ಕುತ್ತಿಗೆ ಕತ್ತರಿಸಿ ನೇರವಾಗಿ ಬಾಯಿಯಾಗಿ ರಕ್ತ ಸೇವಿಸುತ್ತಾರೆ.


ಸುತ್ತಲೂ ಬೇಲಿ ಹಾಕಿ ಸಣ್ಣ ಪುಟ್ಟ ಗುಡಿಸಲಿನಲ್ಲಿ ಮಸಾಯಿ ಜನಾಂಗದವರು ವಾಸಿಸುತ್ತಾರೆ. ಇವರ ಜನಸಂಖ್ಯೆಯಲ್ಲಿ ಪುರುಷರು ಕಡಿಮೆ ಸಂಖ್ಯೆಯಲ್ಲಿದ್ದು, ಈ ಬುಡಕಟ್ಟು ಜನಾಂಗ ಅಳಿವಿನಂಚಿನಲ್ಲಿದೆ. ಅಲ್ಲದೆ ಸಿಂಹವನ್ನು ಬೇಟೆಯಾಡಿ ಕೊಂದರೆ ಮಾತ್ರ ಪುರುಷರನ್ನು ಗಂಡಸು ಎಂದು ಒಪ್ಪಿಕೊಳ್ಳುತ್ತಾರೆ.