ಪ್ರತಿ ವರ್ಷ ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನದ ಆಚರಿಸಲಾಗುತ್ತದೆ. ಭಾರತದ ಪ್ರಮುಖ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ, ಈ ಸಂದರ್ಭದಲ್ಲಿ ಸ್ವಿಗ್ಗಿ ವಿಶೇಷ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಅಂಕಿ ಅಂಶದ ಪ್ರಕಾರ ಮಾರ್ಚ್ 30,2022 ರಿಂದ ಮಾರ್ಚ್ 25, 2023 ರವರೆಗಿನ ಅವಧಿಯಲ್ಲಿ ದಕ್ಷಿಣ ಭಾರತದ ನೆಚ್ಚಿನ ಬ್ರೇಕ್ ಫಾಸ್ಟ್ ಇಡ್ಲಿಯನ್ನು ಎಷ್ಟು ಜನ ಸೇವಿಸಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿದೆ.
ಸ್ವಿಗ್ಗಿ ಕಳೆದ ವರ್ಷದಲ್ಲಿ 33 ಮಿಲಿಯನ್ (3.3 ಕೋಟಿ ಪ್ಲೇಟ್) ಪ್ಲೇಟ್ ಇಡ್ಲಿಗಳನ್ನು ವಿತರಿಸಿದೆ. ಇದು ಗ್ರಾಹಕರಲ್ಲಿ ಈ ಖಾದ್ಯದ ಬಗ್ಗೆ ಇರುವ ಅಪಾರ ಜನಪ್ರಿಯತೆಯನ್ನು ಸೂಚಿಸುತ್ತದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಇಡ್ಲಿಗಳನ್ನು ಹೆಚ್ಚು ಆರ್ಡರ್ ಮಾಡುವ ಮೊದಲ ಮೂರು ನಗರಗಳಾಗಿವೆ. ಮುಂಬೈ, ಕೊಯಮತ್ತೂರು, ಪುಣೆ, ವೈಜಾಗ್, ದೆಹಲಿ, ಕೋಲ್ಕತ್ತಾ ಮತ್ತು ಕೊಚ್ಚಿ ಇತರ ನಗರಗಳು ನಂತರದ ಸ್ಥಾನಗಳನ್ನು ಅಲಂಕರಿಸಿವೆ.
ವಿಶೇಷವೆಂದರೆ ಹೈದರಾಬಾದ್‌ನ ಒಬ್ಬನೇ ಗ್ರಾಹಕ ಇಡ್ಲಿಗಾಗಿಯೇ ಕಳೆದ ಒಂದು ವರ್ಷದಲ್ಲಿ ₹ 6 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಸ್ವಿಗ್ಗಿ ತಿಳಿಸಿದೆ. ಈ ಬಳಕೆದಾರ ಬೆಂಗಳೂರು ಮತ್ತು ಚೆನ್ನೈನಂತಹ ನಗರಗಳಲ್ಲಿ ಪ್ರಯಾಣಿಸುವಾಗ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಮಾಡಿದ ಆರ್ಡರ್‌ಗಳನ್ನು ಒಳಗೊಂಡಂತೆ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 8,428 ಪ್ಲೇಟ್ ಇಡ್ಲಿಗಳನ್ನು ಆರ್ಡರ್ ಮಾಡಿದ್ದಾರೆ.