ಕೀಟಗಳು ಹಗಲಿನಲ್ಲಿ ಒಂದು ಮಟ್ಟದಲ್ಲಿ ಹಾರುತ್ತವೆ ಎಂದು ನಮಗೆ ತಿಳಿದಿದ್ದರೂ, ಕೃತಕ ಬೆಳಕಿನಲ್ಲಿ ಅವುಗಳ ಹಾರಾಟ ಅನಿರೀಕ್ಷಿತವಾಗಿರುತ್ತದೆ. ಆದರೆ ಈ ಪತಂಗಗಳು ಮತ್ತು ಕೀಟಗಳು ಕೃತಕ ಬೆಳಕಿನಿಂದ ಆಕರ್ಷಿತವಾಗುತ್ತವೆ. ಇದರ ಹಿಂದಿನ ಕಾರಣವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಸಂಶೋಧಕರ ತಂಡವೊಂದು ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದು ಇದರ ಹಿಂದಿನ ಕಾರಣವನ್ನು ಕಂಡುಹಿಡಿದಿದೆ.
ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಜೀವಶಾಸ್ತ್ರಜ್ಞರು ಇದೇ ಅಂಶವನ್ನು ಹೇಳುತ್ತಾರೆ. ಕೀಟಗಳು ಕತ್ತಲೆಯಲ್ಲಿನ ಕೃತಕ ಬೆಳಕನ್ನು ತೆರೆದ ತಕ್ಷಣ ಆಕಾಶದಿಂದ ಬರುತ್ತವೆ ಎಂದು ಪರಿಗಣಿಸುತ್ತವೆ. ಇದರಿಂದಾಗಿ ಅವುಗಳು ಮೇಲಕ್ಕೆ ಮತ್ತು ಕೆಳಕ್ಕೆ ಅಕ್ಷದ ಉದ್ದಕ್ಕೂ ತಮ್ಮನ್ನು ತಾವು ಸುತ್ತುವರಿಯುವಂತೆ ಮಾಡುತ್ತವೆ ಎಂದು ವಿವರಿಸಿದ್ದಾರೆ. ಇದರಿಂದಾಗಿ ಬೆಳಕಿನ ಕಡೆಗೆ ಹೋಗಲು ಅನಿಯಮಿತ ಹಾರಾಟದ ಮಾರ್ಗಗಳನ್ನು ಆ ಕೀಟಗಳು ಅನುಸರಿಸುತ್ತವೆ ಎಂದು ಸಂಶೋಧನಾಕಾರರು ಹೇಳಿದ್ದಾರೆ.
ಇನ್ನು ವಿಜ್ಞಾನಿಗಳ ತಂಡವು ಪ್ರಯೋಗಾಲಯದಲ್ಲಿ ಹೆಚ್ಚಿನ ರೆಸಲ್ಯೂಶನ್ ಮೋಷನ್ ಕ್ಯಾಪ್ಚರ್ ಮತ್ತು ಸ್ಟಿರಿಯೋ ವಿಡಿಯೋಗ್ರಫಿಯನ್ನು ಬಳಸಿತ್ತು. ಕೃತಕ ದೀಪಗಳ ಸುತ್ತ ಕೀಟ ಹಾರಾಟದ 3D ಚಲನಶಾಸ್ತ್ರವನ್ನು ಪುನರ್ನಿರ್ಮಿಸಲು ಬಳಸಲಾಯ್ತು. ಅಲ್ಲದೇ ಸಂಶೋಧಕರು ಕೋಸ್ಟರಿಕಾದ ಲ್ಯಾಬ್ ಮತ್ತು ಕಾಡುಗಳಲ್ಲಿ ಬಲ್ಬ್‌ಗಳನ್ನು ಹಾಕಿ ಅದರ ಸುತ್ತಲೂ ಡ್ರ್ಯಾಗನ್‌ಫ್ಲೈಗಳು, ಚಿಟ್ಟೆಗಳು ಮತ್ತು ಪತಂಗಗಳ ಹಾರಾಟವನ್ನು ಟ್ರ್ಯಾಕ್ ಮಾಡಿದ್ದರು.
ಪ್ರಯೋಗದ ವೇಳೆ ಸಂಶೋಧಕರು ಕೀಟಗಳು ಬೆಳಕಿಗೆ ಮೇಲ್ಮುಖವಾಗಿ ಓರೆಯಾಗಿ ಚಲಿಸುತ್ತವೆ ಎಂದು ಗಮನಿಸಿದ್ದಾರೆ. ಇತರ ಸಮಯಗಳಲ್ಲಿ ಬಲ್ಬ್‌ನ ಮೇಲೆ ತಲೆಕೆಳಗಾಗಿ ತಿರುಗುತ್ತದೆ ಎಂದೂ ಗಮನಿಸಲಾಗಿದೆ. ದಿಕ್ಕಿನ ಪ್ರವೃತ್ತಿಯ ಕಾರಣದಿಂದಾಗಿ ಕೀಟಗಳು ಹಗಲಿನಲ್ಲಿ ಸಮತಟ್ಟಾಗಿ ಹಾರಬಲ್ಲವು. ತಮ್ಮ ಬೆನ್ನನ್ನು ಸೂರ್ಯನ ಬೆಳಕಿಗೆ ತೋರಿಸಲು ಸಮರ್ಥವಾಗಿವೆ ಎಂದು ಕೀಟಶಾಸ್ತ್ರಜ್ಞರು ಈಗಾಗಲೇ ತಿಳಿದುಕೊಂಡಿದ್ದಾರೆ.ಆದಾಗ್ಯೂ, ಕತ್ತಲೆಯಲ್ಲಿ ಕೃತಕ ಬೆಳಕಿನ ಉಪಸ್ಥಿತಿಯಲ್ಲಿ ಅವು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸುತ್ತದೆ.
ಕೀಟಗಳು ಪ್ರಕೃತಿಯ ಸಮತೋಲನಕ್ಕೆ ನಿರ್ಣಾಯಕವಾಗಿದೆ. ಆದರೆ ಕೀಟಗಳು ಇಂದು ಕಾಣೆಯಾಗುತ್ತಿವೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಕೃತಕ ಬೆಳಕಿನಿಂದಾಗಿ ಕೀಟಗಳು ವೇಗವಾಗಿ ಕಡಿಮೆಯಾಗುತ್ತಿವೆ ಎಂದು ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ. ಕೀಟಗಳ ಆವಾಸಸ್ಥಾನದ ನಷ್ಟ, ಹೆಚ್ಚಿದ ಕೀಟನಾಶಕ ಬಳಕೆ, ಹವಾಮಾನದಲ್ಲಿ ಆಗುತ್ತಿರುವಂತಹ ಬದಲಾವಣೆಯು ದೊಡ್ಡ ಪ್ರಮಾಣದಲ್ಲಿ ಕೀಟಗಳು ನಾಶವಾಗುವುದಕ್ಕೆ ಕಾರಣವಾಗಿದೆ.
ಆದ್ದರಿಂದ ರಾತ್ರಿಯಲ್ಲಿನ ಕೃತಕ ಬೆಳಕಿನಿಂದ ಕೀಟಗಳು ದೊಡ್ಡ ಪ್ರಮಾಣದಲ್ಲಿ ನಾಶವಾಗುತ್ತಿದ್ದರೂ ಈ ಕಾರಣವು ಕಡೆಗಣಿಸಲ್ಪಟ್ಟಿದೆ ಎಂದೇ ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಪ್ರಕೃತಿಯ ಪ್ರತಿ ಜೀವರಾಶಿಯೂ ಪ್ರಮುಖವಾದದ್ದು. ನಾವು ಮನುಷ್ಯರು ನಮಗೆ ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಅನೇಕ ಅನುಕೂಲಗಳನ್ನು ಮಾಡಿಕೊಳ್ಳುತ್ತೇವೆ. ಆದರೆ ಇದು ಇಂಥ ಚಿಕ್ಕ ಚಿಕ್ಕ ಕೀಟಗಳ ಪಾಲಿಗೆ ಮಾರಕವಾಗಿದೆ. ಇದನ್ನು ಅರಿತುಕೊಂಡ ಮೇಲಾದರೂ ಈ ಜೀವರಾಶಿಗಳ ಉಳಿವಿಗೆ ಉಪಾಯ ಕಂಡುಕೊಳ್ಳಬೇಕಿದೆ.