ಮಾರ್ಕ್ ಜುಕರ್ಬರ್ಗ್ ವಿದ್ಯಾಭ್ಯಾಸ ಪೂರ್ಣಗೊಳಿಸದ ವಿಶ್ವದ ಇನ್ನೋರ್ವ ಅತ್ಯಂತ ಯಶಸ್ವಿ ವ್ಯಕ್ತಿ! ಜಾಗತಿಕವಾಗಿ ಖ್ಯಾತಿಗಳಿಸಿರುವ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಅವರು ಫೇಸ್ಬುಕ್ ಕಂಪನಿಯನ್ನು ಆರಂಭಿಸಲೆಂದೇ ಕಾಲೇಜು ತೊರೆದರು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪರಸ್ಪರ ಭೇಟಿಯಾಗಲು ನೋಂದಾಯಿಸಿಕೊಳ್ಳಬಹುದಾದ ವೆಬ್ಸೈಟ್ ರಚಿಸಿದ್ದರು. ಇದುವೇ ಮುಂದೆ ಇಂದಿನ ಮೆಟಾ ಫೇಸ್ಬುಕ್!
ಸ್ಟೀವ್ ಜಾಬ್ಸ್! ಈ ಹೆಸರೇ ಹಲವರಿಗೆ ಅಚ್ಚರಿ. ವಿಶ್ವದಲ್ಲಿ ಕಾಲೇಜು ಪದವಿಗಳಿಲ್ಲದ ಅತ್ಯಂತ ಗುರುತಿಸಲ್ಪಟ್ಟ ಬಿಲಿಯನೇರ್ಗಳಲ್ಲಿ ಒಬ್ಬರು. ಉತ್ತಮ ಕಂಪನಿಯನ್ನು ಪ್ರಾರಂಭಿಸಲು ನಿಮಗೆ ಕಾಲೇಜು ಪದವಿ ಅಗತ್ಯವಿಲ್ಲ ಎಂದು ತೋರಿಸುವ ಅತ್ಯುತ್ತಮ ಉದಾಹರಣೆ ಸ್ಟೀವ್ ಜಾಬ್ಸ್. ತಾವು ಓದುತ್ತಿರುವ ಕಾಲೇಜು ಶಿಕ್ಷಣ ತಮಗೆ ಸರಿಬರಲ್ಲ, ಮತ್ತು ಓದಲೆಂದೇ ಇಷ್ಟು ಹಣವನ್ನು ಖರ್ಚು ಮಾಡುವುದು ಯೋಗ್ಯವಲ್ಲ ಎಂದು ಅವರು ಕಾಲೇಜಿಗೆ ಶುಭವಿದಾಯ ಹೇಳಿದರು.
ವಾಲ್ಟ್ ಡಿಸ್ನಿ, ವಾಲ್ಟ್ ಡಿಸ್ನಿ ಕಂಪನಿಯ ಸಹ ಸಂಸ್ಥಾಪಕ - ಡಿಸ್ನಿ ಅಂದಕೂಡಲೆ ಚಿಣ್ಣರಿಂದ ಹಿಡಿದು ವೃದ್ಧರ ಕಿವಿಗಳೂ ನೆಟ್ಟಗಾಗುತ್ತವೆ.1901 ರಲ್ಲಿ ಚಿಕಾಗೋದಲ್ಲಿ ಹುಟ್ಟಿದ ಇವರು ತಮ್ಮ 16 ನೇ ವರ್ಷದಲ್ಲಿ ಮೊದಲ ವಿಶ್ವಯುದ್ಧದಲ್ಲಿ ಹೋರಾಡಲು ಅಧ್ಯಯನವನ್ನು ನಿಲ್ಲಿಸಿದರು. ಆದರೆ ಅಪ್ರಾಪ್ತರಾಗಿದ್ದ ಕಾರಣ ಯುದ್ಧಕ್ಕೆ ಅವರನ್ನು ಸೇರಿಸಿಕೊಳ್ಳಲಿಲ್ಲ. 1923 ರಲ್ಲಿ ಅವರು ತಮ್ಮ ಸಹೋದರನೊಂದಿಗೆ ಕಾರ್ಟೂನ್ ರಚನೆಯಲ್ಲಿ ತೊಡಗಿಕೊಂಡರು.
ರಿಚರ್ಡ್ ಬ್ರಾನ್ಸನ್, ವರ್ಜಿನ್ ಗುಂಪಿನ ಸ್ಥಾಪಕ- ವಿಶ್ವದಲ್ಲಿ ಕಾಲೇಜು ಪದವಿ ಇಲ್ಲದ ಅತ್ಯಂತ ಪ್ರಸಿದ್ಧ ಯಶಸ್ವಿ ವ್ಯಕ್ತಿಗಳಲ್ಲಿ ಬ್ರಾನ್ಸನ್ ಒಬ್ಬರು., ಅವರ ವರ್ಜಿನ್ ಬ್ರ್ಯಾಂಡ್ ವಿಶ್ವಾದ್ಯಂತ ಅತ್ಯಂತ ಸುಲಭವಾಗಿ ಗುರುತಿಸಲ್ಪಡುವ ಬ್ರಾಂಡ್ ಆಗಿದೆ. ಶಾಲೆ ಕಾಲೇಜಿನಲ್ಲಿ ಒಮ್ಮೆಯೂ ಒಳ್ಳೆ ಅಂಕ ಗಳಿಸಿದ ವಿದ್ಯಾರ್ಥಿ ಎಂದು ಅವರನ್ನು ಗುರುತಿಸುತ್ತಲೇ ಇರಲಿಲ್ಲವಂತೆ.