ಭಾರತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಆಜಾದ್ ಹಿಂದ್ ಫೌಜ್ ಹೊಸ ಕ್ರಾಂತಿ ಸೃಷ್ಟಿಸಿತ್ತು. ಅಂದು ಸೇನಾ ಪಡೆಯಲ್ಲಿ ಕಾರ್ಯ ನಿರ್ವಹಿಸಿದ ಪ್ರಮುಖ ಅಧಿಕಾರಿಗಳಲ್ಲಿ ಜನರಲ್ ಷಾ ನವಾಜ್ ಖಾನ್ ಕೂಡ ಒಬ್ಬರು. ಅವಿಭಜಿತ ಭಾರತದ ರಾವಲ್ಪಿಂಡಿ( ಈಗಿನ ಪಾಕಿಸ್ತಾನ)ಯಲ್ಲಿ ನವಾಜ್ ಖಾನ್ ಜನಿಸಿದ್ದರು. ತಮ್ಮ ವಿದ್ಯಭ್ಯಾಸವನ್ನು ಅಲ್ಲೇ ಪೂರೈಸಿದ್ದ ಇವರು ಬ್ರಿಟೀಷ್ ಸೈನ್ಯದಲ್ಲಿ ಕ್ಯಾಪ್ಟನ್ ಆಗಿದ್ದರು. ಯಾವಾಗ ನೇತಾಜಿ ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಸೇನೆಯನ್ನು ಸ್ಥಾಪಿಸಿದ್ದರೊ, ತಮ್ಮ ಕೆಲಸ ತೊರೆದು ದೇಶಕ್ಕಾಗಿ ಹೋರಾಡಲು ಮುಂದಾದರು. ನೇತಾಜಿ ಕೂಡ ತಮ್ಮ ಸೈನ್ಯದಲ್ಲಿ ಷಾ ನವಾಜ್ ಖಾನ್ಗೆ ಮೇಜರ್ ಜನರಲ್ ಪದವಿಯನ್ನು ನೀಡಿದರು.
ಅದರ ನಡುವೆ ಆಜಾದ್ ಹಿಂದ್ ಸೇನೆಯು ಬ್ರಿಟಿಷರಿಗೆ ಶರಣಾಗಬೇಕಾಯಿತು. ಈ ವೇಳೆ ಜನರಲ್ ನವಾಜ್ ಖಾನ್ ರನ್ನು ಬಂಧಿಸಲಾಯಿತು. ಅಂದು ಇವರ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿದ್ದು ಪಂಡಿತ್ ಜವಾಹರಲಾಲ್ ನೆಹರು ಎಂಬುದು ವಿಶೇಷ. ಕೆಂಪು ಕೋಟೆಯ ಮೇಲಿನ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ ತ್ರಿವರ್ಣ ಧ್ವಜವನ್ನು ಹಾರಿಸಿದ ಏಕೈಕ ಜನರಲ್ ಎಂದರೆ ಷಾ ನವಾಜ್ ಖಾನ್. ಇಂದಿಗೂ ಕೆಂಪು ಕೋಟೆಯಲ್ಲಿ ನಡೆಯುವ ಪ್ರತಿ ನಿತ್ಯ ಸಂಜೆ ನಡೆಯುವ ಲೈಟ್ ಅಂಡ್ ಸೌಂಡ್ ಕಾರ್ಯಕ್ರಮದಲ್ಲಿ ನೇತಾಜಿ ಅವರ ಧ್ವನಿಯೊಂದಿಗೆ ಷಾ ನವಾಜ್ ಖಾನ್ ಅವರ ಶಬ್ಧವನ್ನು ಕೇಳಿಸಲಾಗುತ್ತಿದೆ.
ಸ್ವತಂತ್ರ ಪೂರ್ವದಲ್ಲಿ ಜನರಲ್ ಷಾ ನವಾಜ್ ಖಾನ್ ಅವರ ಇಡೀ ಕುಟುಂಬ ರಾವಲ್ಪಿಂಡಿಯಲ್ಲಿ ವಾಸಿಸುತ್ತಿದ್ದರು. ಆದರೆ ಭಾರತ-ಪಾಕ್ ವಿಭಜನೆಯ ಸಂದರ್ಭದಲ್ಲಿ ದೇಶದ ಮೇಲಿನ ಪ್ರೀತಿಯಿಂದ ನವಾಜ್ ಅವರು ಕುಟುಂಬವನ್ನು ತೊರೆದು ಮಗನೊಂದಿಗೆ ಭಾರತಕ್ಕೆ ಬಂದಿದ್ದರು. ಅಲ್ಲದೆ ಅವರ ಅರ್ಹತೆಗೆ ಅನುಗುಣವಾಗಿ ನೆಹರು ಅವರ ಕ್ಯಾಬಿನೆಟ್ನಲ್ಲಿ ಸ್ಥಾನ ನೀಡಲಾಯಿತು. ದೀರ್ಘಕಾಲ ಕೇಂದ್ರ ಸಚಿವರಾಗಿದ್ದ ಅವರನ್ನು 1956ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯ ತಿಳಿಯಲು ರಚಿಸಲಾದ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಮೀರತ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಷಾ ನವಾಜ್ ಖಾನ್ ನಾಲ್ಕು ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. 1965ರಲ್ಲಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಕ್ಯಾಬಿನೆಟ್ನಲ್ಲಿ ಕೃಷಿ ಸಚಿವರಾಗಿದ್ದ ಇವರಿಗೆ ಅಚ್ಚರಿಯೊಂದು ಕಾದಿತ್ತು. ಭಾರತ-ಪಾಕ್ ಯುದ್ಧ ಆರಂಭವಾಗುತ್ತಿದ್ದಂತೆ ಕೃಷಿ ಮಂತ್ರಿಯ ಹೆಸರು ಪ್ರಮುಖ ಸುದ್ದಿಯಾದವು. ಏಕೆಂದರೆ ಶತ್ರು ಸೈನ್ಯವನ್ನು ದೇಶದ ಸಚಿವರ ಮಗ ಮುನ್ನೆಡೆಸುತ್ತಿದ್ದರು. ಪಾಕಿಸ್ತಾನ ಸೈನ್ಯದ ಪ್ರಮುಖ ಹುದ್ದೆಯಲ್ಲಿ ಷಾ ನವಾಜ್ ಅವರ ಮಗ ಮಹಮೂದ್ ನವಾಜ್ ಅಲಿ ಭಾರತದೊಂದಿಗೆ ಯುದ್ಧ ಸಾರಿದ್ದರು.
ಪಾಕ್ ಸೇನಾಧಿಕಾರಿಯಾಗಿದ್ದ ವೇಳೆ ಮಹಮೂದ್ ನವಾಜ್ ಯಾವತ್ತೂ ತಂದೆಯನ್ನು ಭೇಟಿಯಾಗಿರಲಿಲ್ಲ. ಸೇನಾ ಹುದ್ದೆಯಿಂದ ನಿವೃತ್ತಿ ಹೊಂದಿದ ಬಳಿಕ ಷಾ ನವಾಜ್ ರನ್ನು ಮಹಮೂದ್ ಭಾರತದಲ್ಲಿ ಭೇಟಿಯಾಗಿದ್ದರು. ಇಂದಿಗೂ ಷಾ ನವಾಜ್ ಕುಟುಂಬದ ಅನೇಕರು ಪಾಕ್ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್ ಝಹೀರುಲ್ ಇಸ್ಲಾಂ ಇವರ ಸೋದರ ಸಂಬಂಧಿಯಾಗಿದ್ದರು. ಹಾಗೆಯೇ ಷಾ ನವಾಜ್ ಅವರ ಸಹೋದರೊಬ್ಬರು ಪಾಕ್ ಸೈನ್ಯದಲ್ಲಿ ಬ್ರಿಗೇಡಿಯರ್ ಹುದ್ದೆಯನ್ನು ಅಲಂಕರಿಸಿದ್ದರು.