ಈಗ ಇಷ್ಟೊಂದು ಪ್ರಮಾಣದಲ್ಲಿ ಈರುಳ್ಳಿಯ ಬೆಲೆ ಜಾಸ್ತಿಯಾಗೋಕೆ ಅದ್ರಲ್ಲೂ ಡಬಲ್ ಆಗೋಕೆ ಕಾರಣವೇನು ಎನ್ನುವುದನ್ನು ವ್ಯಾಪಾರಿಗಳು ಮತ್ತು ಈರುಳ್ಳಿ ಬೆಳೆಗಾರರು ವಿವರಿಸಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನೇಕ ದೊಡ್ಡ ಗೋಡೌನ್ಗಳಲ್ಲಿ ಶೇಖರಣೆಯಾಗಿದ್ದ ಈರುಳ್ಳಿ ಪ್ರವಾಹದಿಂದಾಗಿ ನಾಶವಾಗಿಬಿಡ್ತು. ಇಟ್ಟಲೇ ಟನ್ಗಟ್ಟಲೆ ಈರುಳ್ಳಿ ಕೊಳೆತು ಹೋಗಿದೆ. ಹಾಗಾಗಿ ಈಗಿರುವ ಈರುಳ್ಳಿಗೆ ಬೆಲೆ ಹೆಚ್ಚಿದೆ.
ಈರುಳ್ಳಿಯ ಬೆಲೆ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಏರಿಕೆ ಕಂಡಿರುವುದರಿಂದ ರೈತರಂತೂ ಖುಷಿಯಾಗಿದ್ದಾರೆ. ಈಗಾಗಲೇ ಪ್ರವಾಹ ಮತ್ತಿತರ ಕಾರಣಗಳಿಂದ ಲಕ್ಷಗಟ್ಟಲೆ ನಷ್ಟವನ್ನೇ ಅನುಭವಿಸಿದ್ದ ರೈತರು ಕೊನೆಗೂ ಒಂದಷ್ಟು ರೇಟ್ ಬಂದಿದ್ದು ನೋಡಿ ಸಂತಸಪಟ್ಟಿದ್ದಾರೆ. ಒಂದು ಕೆಜಿ ಈರುಳ್ಳಿ ಬೆಳೆಯಲು ರೈತನಿಗೆ ಮೊದಲು 15 ರುಪಾಯಿ ಖರ್ಚಾಗುತ್ತಿತ್ತು, ಈಗ ಅದು 16 ರೂಪಾಯಿ ಆಗಿದೆ. ಮಾರುಕಟ್ಟೆಯಲ್ಲಿ ಕೆಜಿಗೆ 30 ರೂಪಾಯಿ ಸಿಕ್ಕರೆ ಅಷ್ಟರಮಟ್ಟಿಗೆ ರೈತ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಾನೆ.
ಹಾಗಿದ್ರೆ ಬೆಲೆಯೇರಿಕೆ ಆಗೇ ಆಗುತ್ತಾ? ಈಗಿನ ಪರಿಸ್ಥಿತಿ ನೋಡಿದ್ರೆ ಹೌದು ಎನಿಸುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರವಾಹದಿಂದ ಈರುಳ್ಳಿ ನಾಶವಾಗಿದ್ರೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ತೌಕ್ತೆ ಮತ್ತು ಯಾಸ್ ಚಂಡಮಾರುತದಿಂದ ರೈತರು ಬೆಳೆದ ಈರುಳ್ಳಿ ಹೊಲಗಳಲ್ಲೇ ಕೊಳೆತು ಹೋಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಈರುಳ್ಳಿಯ ಬೆಲೆಗಳು ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.