ಹುಟ್ಟು ಉಚಿತ ಸಾವು ಖಚಿತ ಎನ್ನೋ ಮಾತು ಅಕ್ಷರಶಃ ಸತ್ಯ. ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು. ಇದು ವಿಧಿಲಿಖಿತ. ಆದ್ರೆ ಸಾವು ಎಂಬುದು ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಬರುತ್ತೋ ಅದನ್ನು ಹೇಳೋಕೆ ಆಗಲ್ಲ. ಅದೇ ರೀತಿ ಸಾವಿನಿಂದ ತಪ್ಪಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಿಲ್ಲ. ಕೆಲವೊಬ್ಬರು ಸದ್ದಿಲ್ಲದಂತೆ ಪ್ರಾಣ ಬಿಟ್ಟರೆ, ಮತ್ತೆ ಕೆಲವರಿಗೆ ಸಾವು ಬಹಳ ಕ್ರೂರ ರೂಪದಲ್ಲಿ ಬರುತ್ತೆ. ಜನ ಹೇಗೆಲ್ಲಾ ಸಾಯ್ತಾರೆ ಎಂಬುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಸಾವು ಸಂಭವಿಸಿದೆ. 20 ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯನ್ನು ಸಾಯಿಸಲು ಆಗದ ಗುಂಡು, ಅವನಿಗಾಗಿಯೇ 20 ವರ್ಷಗಳಿಂದ ಒಂದು ಮರದಲ್ಲಿ ಅಡಗಿ ಕುಳಿತುಕೊಂಡಿತ್ತು.
ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ. ಈ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಗುಂಡು ಅದ್ಹೇಗೆ ಮರದಲ್ಲಿ ಅವಿತು ಕುಳಿತುಕೊಂಡು ಬಳಿಕ ಅದೇ ವ್ಯಕ್ತಿಯನ್ನು ಬಲಿ ಪಡೆದುಕೊಂಡಿತು ಎಂದು ನಿಮ್ಮೆಲ್ಲಾ ಗೊಂದಲಗಳಿಗೆ ಉತ್ತರ ಸಿಗಬೇಕಾದರೆ ಮುಂದೆ ಓದಿ. ಆತನ ಹೆಸರು ಹೆನ್ರಿ ಜಿಗ್ಲ್ಯಾಂಡ್. ಈತ ಮರಕ್ಕೆ ಸಂಬಂಧಿಸಿದ ಉದ್ಯಮ ನಡೆಸುತ್ತಿದ್ದ. 20 ವರ್ಷಗಳ ಹಿಂದೆ ಹೆನ್ರಿಗೆ ಮ್ಯಾಸಿ ಎಂಬ ಹುಡುಗಿಯ ಮೇಲೆ ಪ್ರೇಮಾಂಕುರವಾಗಿತ್ತು. ಕೆಲವು ವರ್ಷಗಳವರೆಗೆ ಇವರ ಪ್ರೀತಿಯ ಪಯಣ ಮುಂದುವರೆದಿತ್ತು. ಮ್ಯಾಸಿ ಮದುವೆ ಮಾಡಿಕೊಳ್ಳೋಣ ಎಂದು ಹೇಳಿದಾಗ ಹೆನ್ರಿ ಇದಕ್ಕೆ ಒಪ್ಪಲಿಲ್ಲ. ಇದು ಮ್ಯಾಸಿಗೆ ಶಾಕ್ ನೀಡಿತ್ತು.
ಹೆನ್ರಿಯ ಆ ನಡವಳಿಕೆ ಮ್ಯಾಸಿಯ ಮನಸ್ಸಿಗೆ ತುಂಬಾ ಆಘಾತ ನೀಡಿತ್ತು. ಈ ನೋವನ್ನು ಸಹಿಸಿಕೊಳ್ಳಲಾಗೇ ಮ್ಯಾಸಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮ್ಯಾಸಿಗೆ ಒಬ್ಬ ಅಣ್ಣ ಇದ್ದ. ಆತ ತನ್ನ ತಂಗಿಯನ್ನು ತುಂಬಾ ಪ್ರೀತಿಸುತ್ತಿದ್ದ. ತಂಗಿಯ ಸಾವು ಅಣ್ಣನಿಗೆ ದೊಡ್ಡ ಆಘಾತ ನೀಡಿತ್ತು. ಮ್ಯಾಸಿ ಸಾಯುವ ಮುನ್ನ ತನ್ನ ಪ್ರೀತಿಯ ವಿಷಯವನ್ನು ತನ್ನ ಅಣ್ಣನ ಜೊತೆ ಹೇಳಿಕೊಂಡಿದ್ದಳು. ತಂಗಿ ಸತ್ತದ್ದನ್ನು ಅರಗಿಸಿಕೊಳ್ಳಲಾಗದೇ ಅವಳ ಅಣ್ಣ, ಕೊನೆಗೆ ತನ್ನ ತಂಗಿಯ ಸಾವಿಗೆ ಕಾರಣನಾದ ಹೆನ್ರಿಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದ.
ಅಂತೆಯೇ ಹೆನ್ರಿಯ ದಿನಚರಿಯ ಮೇಲೆ ಮ್ಯಾಸಿಯ ಅಣ್ಣ ಒಂದು ಕಣ್ಣಿಟ್ಟಿದ್ದ. ಹೆನ್ರಿಯದ್ದು ಹೇಳಿ ಕೇಳಿ ಮರದ ಉದ್ಯಮ. ಆತ ಆಗಾಗ್ಗೆ ಕಾಡುಗಳಿಗೆ ಭೇಟಿ ನೀಡುತ್ತಿದ್ದ. ಇದೇ ಒಳ್ಳೆಯ ಅವಕಾಶ ಎಂದು ಮ್ಯಾಸಿಯ ಅಣ್ಣ, ಹೆನ್ರಿಯನ್ನು ಮುಗಿಸಲು ಬಂದೂಕು ಹಿಡಿದುಕೊಂಡು ಕಾಡಿನಲ್ಲಿ ಆತನನ್ನು ಫಾಲೋ ಮಾಡುತ್ತಾನೆ. ಹೆನ್ರಿ ಒಂದು ಮರದ ಬಳಿ ನಿಂತಿದ್ದಾಗ ಮ್ಯಾಸಿ ಅಣ್ಣ ಬಂದೂಕಿನಿಂದ ಆತನೆಡೆಗೆ ಗುಂಡು ಹಾರಿಸುತ್ತಾನೆ. ಆದರೆ ಅದೃಷ್ಟವಶಾತ್ ಆ ಗುಂಡು ಹೆನ್ರಿಗೆ ತಾಗುವುದಿಲ್ಲ. ಮರಕ್ಕೆ ತಗುಲುತ್ತೆ, ಆದರೆ ಆ ಗುಂಡಿನ ಶಬ್ದದಿಂದ ಹೆನ್ರಿ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಆದರೆ ಮ್ಯಾಸಿಯ ಅಣ್ಣ ತಿಳಿದುಕೊಂಡಿದ್ದೇ ಬೇರೆಯಾಗಿತ್ತು. ಹೆನ್ರಿ ಸತ್ತೇ ಹೋದ ಎಂದು ಅಲ್ಲಿಂದ ಕಾಲ್ಕಿತ್ತಿದ್ದ.
ಈ ಕಡೆ ಬದುಕುಳಿದಿದ್ದ ಹೆನ್ರಿ ಮದುವೆಯಾಗಿ ತನ್ನ ಹೆಂಡತಿ-ಮಕ್ಕಳೊಂದಿಗೆ ಸುಖವಾಗಿದ್ದ. ಹೀಗೆ 20 ವರ್ಷ ಕಳೆದು ಹೋಗುತ್ತದೆ. ಆದರೆ ಇಲ್ಲಿಯೇ ಈ ಘಟನೆಗೆ ಒಂದು ಟ್ವಿಸ್ಟ್ ಇದೆ. ಏನು ಅಂತೀರಾ? ಅದೊಂದು ದಿನ ಅಂದರೆ ಘಟನೆ ಸಂಭವಿಸಿ 20 ವರ್ಷಗಳಾದ ಬಳಿಕ ಹೆನ್ರಿ ಮತ್ತೆ ಅದೇ ಕಾಡಿಗೆ ಹೋಗುತ್ತಾನೆ. ಅಂದು ಹೆನ್ರಿ ಮರವನ್ನು ಸ್ಪೋಟಿಸಿ, ಉರುಳಿಸುವ ಕೆಲಸ ಮಾಡಬೇಕಿತ್ತು. ಅದಕ್ಕಾಗಿ ಆತ ಡೈನಾಮೈಟ್ ಬಳಸಿ ತುಂಬಾ ದೂರ ಹೋಗಿ ನಿಂತಿದ್ದ. ಆದರೆ ವಿಧಿಯಾಟ ಅಂದರೆ ಇದೇ ನೋಡಿ. ಆ ಮರ ಸ್ಪೋಟಗೊಳ್ಳುತ್ತಿದ್ದಂತೆ, ಅದರಲ್ಲಿ 20 ವರ್ಷಗಳ ಹಿಂದೆ ಅಡಗಿ ಕುಳಿತಿದ್ದ ಬುಲೆಟ್ (ಮ್ಯಾಸಿಯ ಅಣ್ಣ ಹೊಡೆದಿದ್ದ ಗುಂಡು) ನೇರವಾಗಿ ಹೆನ್ರಿಯ ತಲೆಯೊಳಗೆ ಹೊಕ್ಕುತ್ತದೆ. ಪರಿಣಾಮ ಹೆನ್ರಿ ಸ್ಥಳದಲ್ಲೇ ಸಾವನ್ನಪ್ಪುತ್ತಾನೆ.