ಇತ್ತೀಚಿನ ದಿನಗಳಲ್ಲಿ ಮಾಲ್‌ವೇರ್ ಲಿಂಕ್‌ಗಳನ್ನು ಹೊಂದಿರುವ ಯೂಟ್ಯೂಬ್ ವಿಡಿಯೋಗಳು ಬಹಳಷ್ಟು ಯೂಟ್ಯೂಬ್‌ನಲ್ಲಿ ಕಂಡುಬರುತ್ತಿದೆ ಎಂದು ಸೈಬರ್‌ಸೆಕ್ಯುರಿಟಿ ಸಂಶೋಧಕರು ಇತ್ತೀಚೆಗೆ ಕಂಡುಕೊಂಡಿದ್ದಾರೆ. AI ಸೈಬರ್-ಸೆಕ್ಯುರಿಟಿ ಸಂಸ್ಥೆ CloudSEK ನ ಸಂಶೋಧನೆಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಮಾಲ್‌ವೇರ್ ಲಿಂಕ್‌ಗಳನ್ನು ಹೊಂದಿರುವ ವಿಡಿಯೋಗಳು 200 ರಿಂದ 300 ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಅನೇಕ ಜನರು ವಿವಿಧ ಸಾಫ್ಟ್‌ವೇರ್‌ಗಳ ಪ್ರೀಮಿಯಂ ಆವೃತ್ತಿಯನ್ನು ಪಡೆಯಲು ಬಯಸುತ್ತಾರೆ ಆದರೆ ಅದನ್ನು ಪಾವತಿಸಲು ಅವರ ಬಳಿ ಸಾಕಷ್ಟು ಹಣವಿಲ್ಲ ಅಥವಾ ಅವರು ಕ್ರ್ಯಾಕ್ಡ್ / ಮಾರ್ಪಡಿಸಿದ ಸಾಫ್ಟ್‌ವೇರ್ ಅನ್ನು ಹೇಗೆ ಡೌನ್‌ಲೋಡ್ ಮಾಡುವುದು ಎಂದು ಇಂಟರ್ನೆಟ್‌ನಲ್ಲಿ ಹುಡುಕುತ್ತಾರೆ. ವಿಶೇಷವಾಗಿ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಿದ ನಂತರ, ಆ ವಿಡಿಯೋದಲ್ಲಿ ಹೇಳಿದಂತೆ ಮಾಡುತ್ತಾರೆ. ಆದರೆ ಹ್ಯಾಕರ್‌ಗಳು ನಿಖರವಾಗಿ ಅಂತಹವರನ್ನು ಗುರಿಯಾಗಿಸಿಕೊಂಡು ಈ ರೀತಿಯ ಸ್ಕ್ಯಾಮ್ ಅನ್ನು ಮಾಡಲು ಮುಂದಾಗಿದ್ದಾರೆ.
ಸಂಶೋಧನೆಯ ಪ್ರಕಾರ, ಸೈಬರ್ ಅಪರಾಧಿಗಳು ಕ್ರ್ಯಾಕ್ಡ್ ಸಾಫ್ಟ್‌ವೇರ್ ಡೌನ್‌ಲೋಡ್‌ಗಳು, ದುರುದ್ದೇಶಪೂರಿತ ಲಿಂಕ್‌ಗಳನ್ನು ಹೊಂದಿರುವ 5-10 ವಿಡಿಯೋಗಳನ್ನು ಪ್ರತಿ ಗಂಟೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಈ ವಿಡಿಯೋಗಳು ಮಾಲ್ವೇರ್ಗಳನ್ನು ಡೌನ್‌ಲೋಡ್ ಮಾಡಲು ಬಳಕೆದಾರರನ್ನು ಪ್ರೋತ್ಸಾಹಿಸುತ್ತವೆ. ಈ ಅಪರಾಧಿಗಳು ವಿಡಿಯೋಗಳನ್ನು ಅಪ್‌ಲೋಡ್ ಮಾಡುವಾಗ ಯೂಟ್ಯೂಬ್ ಅಲ್ಗಾರಿದಮ್‌ನಿಂದ ಗಮನಕ್ಕೆ ಬರದಂತೆ ಎಚ್ಚರಿಕೆ ವಹಿಸುತ್ತಾರೆ.
ಇವು AI ಜನರೇಟರ್ ವಿಡಿಯೋಳಾಗಿವೆ. ಆದ್ದರಿಂದ ಆ ವಿಡಿಯೋಗಳನ್ನು ಗುರುತಿಸಲು ಅಥವಾ ತೆಗೆದುಹಾಕಲು ಕಷ್ಟವಾಗುತ್ತದೆ. ನವೆಂಬರ್ 2022 ರಿಂದ ಯೂಟ್ಯೂಬ್ ವಿಡಿಯೋಗಳಲ್ಲಿ ವಿಡಾರ್, ರೆಡ್‌ಲೈನ್, ರಕೂನ್‌ನಂತಹ ಇನ್ಫೋಸ್ಟೀಲರ್ ಮಾಲ್‌ವೇರ್ ಅನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಮಾಲ್‌ವೇರ್ ಕ್ರೆಡಿಟ್ ಕಾರ್ಡ್ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆಗಳು, ಪಾಸ್‌ವರ್ಡ್‌ಗಳಂತಹ ಸೂಕ್ಷ್ಮ ಮಾಹಿತಿಯನ್ನು ಕದಿಯುತ್ತದೆ.