ಯಾವುದೇ ಆ್ಯಪ್ಗಳಾಗಲಿ ಅಥವಾ ಪ್ಲಾಟ್‌ಫಾರ್ಮ್‌ಗಳಾಗಲಿ ತನ್ನ ಬ್ರಾಂಡ್ನ ಆದಾಯ ಗಳಿಸುವ ಉದ್ದೇಶದಿಂದ ಜಾಹೀರಾತನ್ನೇ ಅವಲಂಬಿಸಿಕೊಂಡಿರುತ್ತವೆ. ಅದರಂತೆ ಯೂಟ್ಯೂಬ್‌ನಲ್ಲಿ ಯಾವುದಾದರೂ ಒಂದು ವಿಡಿಯೋ ಪ್ಲೇ ಮಾಡಿದರೆ ವಿವಿಧ ರೀತಿಯ ಜಾಹೀರಾತುಗಳು ಕಾಣಿಸಿಕೊಂಡು ನೋಡುಗರ ಸಮಯವನ್ನು ವ್ಯರ್ಥ ಮಾಡುತ್ತದೆ. ಆದರೆ, ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ. ಯಾಕೆಂದರೆ ಯೂಟ್ಯೂಬ್ ಓವರ್‌ಲೇ ಜಾಹೀರಾತುಗಳ ಪ್ರಸಾರ ನಿಲ್ಲಿಸಲು ಮುಂದಾಗಿದೆ.
ಓವರ್‌ಲೇ ಜಾಹೀರಾತು ಎಂದರೇನು?: ಜಾಹೀರಾತು ವಿಭಾಗದಲ್ಲಿ ಹಲವು ರೀತಿಯ ಜಾಹೀರಾತುಗಳಿದ್ದು, ಅದರಲ್ಲಿ ಓವರ್‌ಲೇ ಜಾಹೀರಾತು ಸಹ ಒಂದಾಗಿದೆ. ಈ ರೀತಿಯ ಜಾಹೀರಾತುಗಳು ಹೆಚ್ಚಾಗಿ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಇವು ವಿಡಿಯೋ ಪ್ಲೇ ಆಗುವಾಗ ವಿಡಿಯೋದ ಕೆಳಭಾಗದಲ್ಲಿ ಪಾಪ್-ಅಪ್ ಕಾರ್ಡ್‌ಗಳಂತೆ ಗೋಚರಿಸುತ್ತವೆ. ಇದರಲ್ಲಿ ಚಿತ್ರ ಹಾಗೂ ಟೆಕ್ಸ್ಟ್ ಇರುವ ಮಾಹಿತಿ ಇರುತ್ತದೆ. ಇದನ್ನು ಅನಗತ್ಯ ಎಂದಲ್ಲಿ ಆ ಫೋಟೋದ ಮೇಲೆ ಕಾಣಿಸಿಕೊಳ್ಳುವ 'x' ಎಂಬ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಕ್ಯಾನ್ಸಲ್ ಮಾಡ್ಬಹುದು.
ಇನ್ಮುಂದೆ ಈ ಜಾಹೀರಾತುಗಳಿರಲ್ಲ: ಗೂಗಲ್ ಮಾಲೀಕತ್ವದ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಯೂಟ್ಯೂಬ್‌ನಲ್ಲಿ ಈವರೆಗೂ ಕಾಣಿಸಿಕೊಳ್ಳುತ್ತಿದ್ದ ಓವರ್‌ಲೇ ಜಾಹೀರಾತುಗಳು ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂದು ಯೂಟ್ಯೂಬ್ ವರದಿ ನೀಡಿದೆ. ಜೊತೆಗೆ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಡಿವೈಸ್‌ಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಜಾಹೀರಾತು ಸ್ವರೂಪಗಳಿಗೆ ಇದನ್ನು ಬದಲಾಯಿಸಲು ಯೂಟ್ಯೂಬ್ ಮುಂದಾಗಿದೆ ಎಂದು ಕಂಪೆನಿ ತಿಳಿಸಿದೆ.
ಎಂದಿನಿಂದ ಈ ಜಾಹೀರಾತುಗಳಿರಲ್ಲ: ಓವರ್‌ಲೇ ಜಾಹೀರಾತುಗಳು ವೀಕ್ಷಕರಿಗೆ ವಿಡಿಯೋ ನೋಡುವಾಗ ಬಹಳಷ್ಟು ಸಮಸ್ಯೆಯನ್ನುಂಟು ಮಾಡುತ್ತದೆ. ಇದು ಇತರ ಜಾಹೀರಾತು ಸ್ವರೂಪಗಳಿಗೆ ಬದಲಾಗುವುದರಿಂದ ಹೆಚ್ಚಿನ ಕ್ರಿಯೇಟರ್ಸ್‌ಗೆ ಉತ್ತಮ ಪರಿಣಾಮ ಉಂಟಾಗುವುದನ್ನು ನಾವು ನಿರೀಕ್ಷಿಸುತ್ತೇವೆ ತಿಳಿಸಿರುವ ಯೂಟ್ಯೂಬ್ ಇದೇ ಏಪ್ರಿಲ್ 6 ರ ನಂತರೆ ಈ ಮಾದರಿಯ ಜಾಹೀರಾತುಗಳು ಲಭ್ಯವಿರುವುದಿಲ್ಲ.