ಹೆಚ್ಚಿನ ಜನರು ಇತ್ತೀಚೆಗೆ ಹೊಸ ಸ್ಮಾರ್ಟ್ಫೋನ್ ಖರೀದಿ ಮಾಡಲಾಗದೆ ಸೆಕೆಂಡ್ ಹ್ಯಾಂಡ್ ಫೋನ್ಗಳನ್ನು ಖರೀದಿ ಮಾಡುತ್ತಾರೆ. ಕೆಲವೊಮ್ಮೆ ಆ ಫೋನ್ಗಳು ಕದ್ದ ಫೋನ್ ಆಗಿರಬಹುದು ಅಥವಾ ಅದು ನಕಲಿ ಮೊಬೈಲ್ ಆಗಿರಬಹುದು. ಕೆಲವೊಮ್ಮೆ ಈ ಫೋನ್ಗಳು ಗ್ರಾಹಕರು ಸಂಕಷ್ಟದಲ್ಲಿ ಸಿಲುಕುವಂತೆ ಮಾಡುತ್ತದೆ. ಆದ್ದರಿಂದ ಸರ್ಕಾರ ಇಂತಹ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮ ಜಾರಿಗೆ ತರುತ್ತಿದೆ. ಕದ್ದ ಮತ್ತು ಕಳೆದುಹೋದ ಸ್ಮಾರ್ಟ್ಫೋನ್ಗಳ ದುರುಪಯೋಗವನ್ನು ತಡೆಯುವ ಕಾರಣಕ್ಕಾಗಿ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ.
ಭಾರತದಲ್ಲಿ ಸ್ಮಾರ್ಟ್ಫೋನ್ಗಳು ಮತ್ತು ಫೀಚರ್ ಫೋನ್ಗಳನ್ನು ತಯಾರಿಸುವ ಎಲ್ಲಾ ಕಂಪನಿಗಳು ಆ ಹ್ಯಾಂಡ್ಸೆಟ್ಗಳನ್ನು ಮಾರಾಟ ಮಾಡುವ ಮೊದಲು ಭಾರತೀಯ ನಕಲಿ ಸಾಧನ ನಿರ್ಬಂಧ ಪೋರ್ಟಲ್ https://icdr.ceir.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು. ಬಿಡುಗಡೆಯಾಗುವಂತಹ ಪ್ರತಿಯೊಂದು ಹ್ಯಾಂಡ್ಸೆಟ್ನ IMEI ಸಂಖ್ಯೆಯನ್ನು ಈ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ನಿಯಮಗಳು ಜನವರಿ 1, 2023 ರಿಂದ ಜಾರಿಗೆ ಬರಲಿದೆ.
ಆದರೆ, ಈ ನಿಯಮಗಳು ಬೇರೆ ದೇಶಗಳ ಸಾಧನ ಭಾರತದಲ್ಲಿ ತಯಾರಾದ ಮತ್ತು ಬೇರೆ ದೇಶಗಳಿಗೆ ರಫ್ತು ಮಾಡುವ ಸ್ಮಾರ್ಟ್ ಫೋನ್ ಗಳಿಗೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಯಮ ಭಾರತದಲ್ಲಿ ಮಾರಾಟವಾಗುವ ಫೋನ್ಗಳಿಗೆ ಮಾತ್ರ ಅನ್ವಯಿಸುತ್ತದೆ. ಜನವರಿ 1 ರಿಂದ ಭಾರತದಲ್ಲಿ ತಯಾರಿಸಲಾದ ಮತ್ತು ಇಲ್ಲಿ ಮಾರಾಟವಾಗುವ ಫೋನ್ಗಳಿಗೆ ಈ ನಿಯಮ ಅನ್ವಯಿಸುತ್ತದೆ
ಭಾರತದಲ್ಲಿ ನಕಲಿ IMEI ಸಂಖ್ಯೆಗಳನ್ನು ಹೊಂದಿರುವ ಲಕ್ಷಗಟ್ಟಲೆ ಫೀಚರ್ ಫೋನ್ಗಳು ಮತ್ತು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ ಎಂದು ಸರ್ಕಾರ್ ತಿಳಿಸಿದೆ. ಜನಪ್ರಿಯ ಬ್ರಾಂಡ್ಗಳ ಮೊಬೈಲ್ಗಳಂತೆಯೇ ಚೀನಾದಿಂದ ನಕಲಿ ಫೋನ್ಗಳು ಬರುತ್ತವೆ. ಆದರೆ ಈ ರೀತಿಯ ಮೊಬೈಲ್ಗಳ ಒರಿಜಿನಲ್ ಅಥವಾ ನಕಲಿಯೇ ಎಮದು ತಿಳಖಿಯುವುದು ಕಷ್ಟ. ಆದರೆ ಇನ್ನು ಮುಂದಿನ ದಿನಗಳಲ್ಲಿ ಈ ನಿಯಮಗಳನ್ನು ಪಾಲಿಸಿದರೆ ನಕಲಿ ಯಾವುದು ಎಂಬುದನ್ನು ಸುಲಭದಲ್ಲಿ ಕಂಡುಹಿಡಿಯಬಹುದು.
ಕಂಪನಿಯು ಸ್ವತಃ ಈ ಪೋರ್ಟಲ್ನಲ್ಲಿ ಐಎಮ್ಇಐ ಸಂಖ್ಯೆಯನ್ನು ನೋಂದಾಯಿಸುತ್ತದೆ ಆದ್ದರಿಂದ ಅದನ್ನು ಗ್ರಾಹಕರಿಗೆ ಅಥವಾ ಸರ್ಕಾರಕ್ಕೆ ಸುಲಭದಲ್ಲಿ ಟ್ರ್ಯಾಕ್ ಮಾಡಬಹುದಾಗಿದೆ. ಇದಲ್ಲದೆ, ಯಾರದ್ದಾದರೂ ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಅದನ್ನು ಕೂಡ ಈ ಮೂಲಕ ಪರಿಶೀಲನೆ ಮಾಡಬಹುದಾಗಿದೆ. ಇನ್ನು ಈ ನಿಯಮ ಕಳೆದುಹೋದ ಫೋನ್ನ ಮೂಲಕ ಕೆಲವರು ದುರ್ಬಳಕೆಯನ್ನು ಮಾಡುತ್ತಾರೆ ಇದನ್ನೂ ಕೂಡ ಇನ್ಮುಂದೆ ತಡೆಯಬಹುದು. ಇದಲ್ಲದೆ ದೇಶದಲ್ಲಿ ಬ್ಲ್ಯಾಕ್ ಮಾರ್ಕೆಟಿಂಗ್ ಕೂಡ ಆರಂಭವಾಗಿದೆ ಇದನ್ನೂ ಕೂಡ ನಿಲ್ಲಿಸಬಹುದು.
ಎರಡು ವರ್ಷಗಳ ಹಿಂದೆ ಮೀರತ್ ಪೊಲೀಸರು ಒಂದೇ ಐಎಮ್ಇಐ ಸಂಖ್ಯೆ ಹೊಂದಿರುವ 13,500 ವಿವೋ ಸ್ಮಾರ್ಟ್ಫೋನ್ಗಳನ್ನು ಗುರುತಿಸಿದ್ದರು. ಇಂತಹ ಹಲವು ಘಟನೆಗಳು ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿವೆ. ಇನ್ನು ಮುಂದೆ ಅಂತಹ ವಿಷಯಗಳನ್ನು ನಿಲ್ಲಿಸುವ ಉದ್ದೇಶದಿಮದ ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಭಾರತದಲ್ಲಿ ತಯಾರಿಸಿದ ಫೋನ್ಗಳ ಹೊರತಾಗಿ, ವಿದೇಶದಿಂದ ಆಮದು ಮಾಡಿಕೊಳ್ಳುವ ಐಫೋನ್ಗಳು ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳಿಗೆ ಕೂಡ ಈ ನಿಯಮ ಅನ್ವಯವಾಗುತ್ತದೆ.
ಪ್ರತಿ ಫೋನ್ ಐಎಮ್ಇಐ ಸಂಖ್ಯೆ ಬೇರೆ ಬೇರೆ ರೀತಿಯದ್ದೇ ಹೊಂದಿರುತ್ತದೆ. ಒಂದೇ ಐಎಮ್ಇಐ ಸಂಖ್ಯೆಯೊಂದಿಗೆ ಬೇರೆ ಯಾವುದೇ ಫೋನ್ ಇರುವುದಿಲ್ಲ. ಹಾಗೆ ಒಂದುವೇಳೆ ಇದ್ದರೆ ಅವುಗಳಲ್ಲಿ ಒಂದು ನಕಲಿ ಫೋನ್ ಆಗಿರುತ್ತದೆ ಎಂದರ್ಥ. ಐಎಮ್ಇಐ ಸಂಖ್ಯೆಯಿಂದ ಅಪರಾಧಿಗಳನ್ನು ಟ್ರ್ಯಾಕ್ ಮಾಡಬಹುದು. ಯಾವುದೇ ಅಪರಾಧ ನಡೆದರೂ ಫೋನ್ ಬಳಸಿ ಸಿಮ್ ಕಾರ್ಡ್ ತೆಗೆದು ಹೊಸ ಸಿಮ್ ಕಾರ್ಡ್ ಬಳಸುವುದು ಅಪರಾಧಿಗಳ ಅಭ್ಯಾಸ. ಸಿಮ್ ಕಾರ್ಡ್ ಅನ್ನು ಬದಲಾಯಿಸಬಹುದು ಆದರೆ ಐಎಮ್ಇಐ ಸಂಖ್ಯೆಯನ್ನು ಬದಲಾಯಿಸಲಾಗುವುದಿಲ್ಲ. ಹಾಗಾಗಿ ಪೊಲೀಸರು ಐಎಂಇಐ ನಂಬರ್ ಮೂಲಕ ಹಲವು ಪ್ರಕರಣಗಳನ್ನು ಬಗೆಹರಿಸಬಹುದಾಗಿದೆ.
ನೀವು ಹೊಸ ಮೊಬೈಲ್ ಅಥವಾ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವಾಗ ಮುಖ್ಯವಾಗಿ ಆ ಫೋನ್ ಐಎಮ್ಇಐ ಸಂಖ್ಯೆಯನ್ನು ಹೊಂದಿದೆಯೇ ಎಂಬುದನ್ನು ಮೊದಲು ನೋಡಿ. ಐಎಮ್ಇಐ ಸಂಖ್ಯೆ ಇಲ್ಲದ ಯಾವುದೇ ಫೋನ್ ಇದ್ದರೆ ಅದು ನಕಲಿ ಎಂದರ್ಥ. ಐಎಮ್ಇಐ ಸಂಖ್ಯೆಯನ್ನು ಪರಿಶೀಲಿಸಲು, ಡಯಲ್ ಪ್ಯಾಡ್ ತೆರೆಯಿರಿ ಮತ್ತು *#06# ಸಂಖ್ಯೆಯನ್ನು ನಮೂದಿಸಿ. ಡ್ಯುಯಲ್ ಸಿಮ್ ಕಾರ್ಡ್ ಬೆಂಬಲವನ್ನು ಹೊಂದಿರುವ ಫೋನ್ಗಳು ಎರಡು ಐಎಮ್ಇಐ ಸಂಖ್ಯೆಗಳನ್ನು ಹೊಂದಿರುತ್ತದೆ.