ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾಮಾನ್ಯವಾಗಿ ಎಲ್ಲರೂ ಬಳಸುವಂಥ ಸರಳ, ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಎಂದರೆ ಅದು ವಾಟ್ಸಾಪ್ ಆಗಿದೆ. ವಾಟ್ಸಾಪ್‌ನಲ್ಲಿನ ನಿಮ್ಮ ವೈಯಕ್ತಿಕ ಮಾಹಿತಿಗಳು ತುಂಬಾ ಸೇಫ್, ಇಲ್ಲಿ ನೀವು ಮಾಡುವ ಟೆಕ್ಟ್ಸ್ ಗಳನ್ನು ಸ್ವತಃ ವಾಟ್ಸಾಪ್ ಕೂಡ ಓದಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿನ ಸುರಕ್ಷತೆಯ ಬಗ್ಗೆ ಆಗಾಗ್ಗೆ ಆರೋಪಗಳು ಕೇಳಿಬರುತ್ತಲೇ ಇವೆ.
ಆದಾಗ್ಯೂ, ವ್ಯಾಪಕವಾಗಿ ಜನಪ್ರಿಯವಾಗಿರುವ ವಾಟ್ಸಾಪ್ ರಾತ್ರಿಯಲ್ಲಿ ತನ್ನ ಮೈಕ್ರೊಫೋನ್ ಅನ್ನು ಬಳಸುತ್ತಿದೆ ಎಂದು ಟ್ವಿಟರ್ ಎಂಜಿನಿಯರ್ ಒಬ್ಬರು ಹೇಳಿಕೊಂಡ ನಂತರ ವಾಟ್ಸಾಪ್ ಮತ್ತೊಂದು ಡೇಟಾ ಗೌಪ್ಯತೆ ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದೆ. ಈ ಪೋಸ್ಟ್ ಹೆಚ್ಚು ವೈರಲ್ ಆಗಿದ್ದಲ್ಲದೇ ಟ್ವಿಟರ್ ಬಾಸ್ ಎಲಾನ್ ಮಸ್ಕ್ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದರಿಂದ ಹೆಚ್ಚು ಗಮನ ಸೆಳೆಯಿತು. ಎಲಾನ್ ಮಸ್ಕ್ ಅವರು ‘ವಾಟ್ಸಾಪ್ ಅನ್ನು ನಂಬಲು ಸಾಧ್ಯವಿಲ್ಲ‘ ಎಂದು ಹೇಳಿದ್ದರು. ಇದರಲ್ಲಿ ಮೆಟಾ ಬಗ್ಗೆ ಮಸ್ಕ್‌ನ ತಿರಸ್ಕಾರ ಸಾಕಷ್ಟು ಸ್ಪಷ್ಟವಾಗಿ ಕಾಣುತ್ತದೆ.
ವಾಟ್ಸಾಪ್ ಅನ್ನು ನಂಬಲು ಸಾಧ್ಯವಿಲ್ಲ ಎಂದ ಎಲಾನ್ ಮಸ್ಕ್: ಟ್ವಿಟರ್ ಇಂಜಿನಿಯರ್ ಒಬ್ಬರು, ಆಂಡ್ರಾಯ್ಡ್ ಡ್ಯಾಶ್‌ಬೋರ್ಡ್ ಅನ್ನು ಪ್ರದರ್ಶಿಸುವ ಮೂಲಕ ವಾಟ್ಸಾಪ್ ತನ್ನ ಮೈಕ್ರೊಫೋನ್ ಅನ್ನು ಬ್ಯಾಕ್‌ಗ್ರೌಂಡ್‌ನಲ್ಲಿ 4:20 ರಿಂದ 6:53 ರವರೆಗೆ ಪ್ರವೇಶಿಸುತ್ತಿದೆ ಎಂದು ಹೇಳಿದ್ದರು. ಫೋಡ್ ಡಬೀರಿ ಎಂಬ ಹೆಸರಿನ ಟ್ವಿಟ್ಟರ್ ಎಂಜಿನಿಯರ್, ಆಂಡ್ರಾಯ್ಡ್ ಡ್ಯಾಶ್‌ಬೋರ್ಡ್‌ನ ಸ್ಕ್ರೀನ್ಶಾಟ್ನಲ್ಲಿ, "ನಾನು ಮಲಗಿರುವಾಗ ಮತ್ತು ನಾನು ಬೆಳಿಗ್ಗೆ 6 ಗಂಟೆಗೆ ಎಚ್ಚರವಾದಾಗಿನಿಂದ WhatsApp ಹಿನ್ನಲೆಯಲ್ಲಿ ಮೈಕ್ರೊಫೋನ್ ಅನ್ನು ಬಳಸುತ್ತಿದೆ ಮತ್ತು ಏನಾಗುತ್ತಿದೆ? ಎಂದು ಪ್ರಶ್ನಿಸಿದ್ದರು.
ಗೂಗಲ್ ಇದನ್ನು ತನಿಖೆ ಮಾಡಬೇಕು ಎಂದ ವಾಟ್ಸಾಪ್ : ಪರಿಸ್ಥಿತಿಯ ಬಗ್ಗೆ ವಾಟ್ಸಾಪ್ ಸ್ಪಷ್ಟನೆ ನೀಡಿದೆ. ಆಂಡ್ರಾಯ್ಡ್‌ನಲ್ಲಿನ ದೋಷದಿಂದಾಗಿ ಸಮಸ್ಯೆ ಉದ್ಭವಿಸುತ್ತಿದೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದೆ. ಗೂಗಲ್ ಪಿಕ್ಸೆಲ್ ಫೋನ್ ಬಳಸುತ್ತಿದ್ದ ಇಂಜಿನಿಯರ್ ಜೊತೆ ಸಂಪರ್ಕದಲ್ಲಿದ್ದೆವು. ಆದರೆ ಅವರು ಬಳಸುತ್ತಿರುವ ಫೋನ್ ಗೂಗಲ್ ಪಿಕ್ಸೆಲ್ ಆಗಿರುವುದರಿಂದ, ಗೂಗಲ್ ಈ ವಿಷಯವನ್ನು ತನಿಖೆ ಮಾಡಬೇಕು ಎಂದು ವಾಟ್ಸಾಪ್ ಹೇಳಿತ್ತು.
ಇದು ದೋಷ ಎನ್ನುತ್ತದೆ ಗೂಗಲ್: ಗೂಗಲ್ ವಕ್ತಾರರು, ಆಂಡ್ರಾಯ್ಡ್‌ನಲ್ಲಿ ಅಸಮರ್ಪಕ ಮಾಹಿತಿಯನ್ನು ಉತ್ಪಾದಿಸುವ ಬಗ್ ಇದೆ ಎಂದು ಖಚಿತಪಡಿಸಿದ್ದಾರೆ. "ನಮ್ಮ ಪ್ರಸ್ತುತ ತನಿಖೆಯ ಆಧಾರದ ಮೇಲೆ, ವಾಟ್ಸಾಪ್ ಬಳಕೆದಾರರ ಮೇಲೆ ಪರಿಣಾಮ ಬೀರುವ ಅಂಡ್ರಾಯ್ಡ್‌ನಲ್ಲಿರುವ ಬಗ್ ಒಂದು ಗೌಪ್ಯತೆ ಡ್ಯಾಶ್‌ಬೋರ್ಡ್‌ನಲ್ಲಿ ತಪ್ಪಾದ ಗೌಪ್ಯತೆ ಸೂಚಕಗಳನ್ನು ಉತ್ಪಾದಿಸುತ್ತದೆ. ನಾವು ಇದರ ಪರಿಹಾರದ ಬಗ್ಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ವಾಟ್ಸಾಪ್‌ನ ಗೌಪ್ಯತೆ ನೀತಿ: ವಾಟ್ಸಾಪ್ ತನ್ನ ಗೌಪ್ಯತೆ ನೀತಿಯು ತನ್ನ ಬಳಕೆದಾರರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ಬಳಕೆದಾರರ ಗೌಪ್ಯತೆಯು ತಮ್ಮ ಆದ್ಯತೆಯಾಗಿದೆ ಎಂದು ವಾಟ್ಸಾಪ್ ಪ್ರತಿಪಾದಿಸಿದೆ. ವಾಟ್ಸಾಪ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಿಸಿರುವ ತನ್ನ ಗೌಪ್ಯತಾ ನೀತಿ ಹೇಳಿಕೆಯಲ್ಲಿ, "ನಾವು ನಿಮ್ಮ ವೈಯಕ್ತಿಕ ಸಂದೇಶಗಳನ್ನು ನೋಡಲು ಅಥವಾ ನಿಮ್ಮ ಕರೆಗಳನ್ನು ಕೇಳಲು ಸಾಧ್ಯವಿಲ್ಲ. ಮೆಟಾ ಆಗಲಿ, ವಾಟ್ಸಾಪ್ ಆಗಲಿ ನಿಮ್ಮ ಸಂದೇಶಗಳನ್ನು ಓದಲು ಅಥವಾ ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಕರೆಗಳನ್ನು ಕೇಳಲು ಸಾಧ್ಯವಿಲ್ಲ.