

ಟೆಲಿಕಾಂ ಕಂಪೆನಿಗಳಾದ ಏರ್ಟೆಲ್, ಐಡಿಯಾ-ವೊಡಾಫೋನ್ ಮುಂದಿನ ತಿಂಗಳಿಂದ ಟ್ಯಾರಿಫ್ ದರ ಹೆಚ್ಚಿಸುವುದಾಗಿ ಈಗಾಗಲೇ ಘೋಷಿಸಿದೆ.


ಅದರಂತೆ ಡಿಸೆಂಬರ್ ಮೊದಲ ವಾರದಿಂದಲೇ ರಿಚಾರ್ಜ್ ದರ ದುಬಾರಿ ಆಗಲಿದೆ ಎಂದು ತಿಳಿದುಬಂದಿದೆ. ಸುಂಕ ಹೆಚ್ಚಳದ ವಿಚಾರವಾಗಿ ಏರ್ಟೆಲ್ ಮೊದಲ ಹಂತದಲ್ಲಿ ಪೋಸ್ಟ್ಪೇಯ್ಡ್ ಚಾರ್ಜ್ ಹೆಚ್ಚಿಸಲು ಮುಂದಾಗಿದೆ.


ಇದರಿಂದ ಮುಂದಿನ ತಿಂಗಳಲ್ಲಿ ಏರ್ಟೆಲ್ ಪೋಸ್ಟ್ಪೇಯ್ಡ್ ಯೋಜನೆ ಪ್ಲ್ಯಾನ್ಗಳು 400 ರೂ.ಗಿಂತ ಕಡಿಮೆಗೆ ಲಭ್ಯವಿರುವುದಿಲ್ಲ ಎಂದು ಟೆಲಿಕಾಂ ಟಾಕ್ ವರದಿ ತಿಳಿಸಿದೆ.


ಈ ಮಾಹಿತಿ ಅನುಸಾರ ಪ್ರಸ್ತುತ ಏರ್ಟೆಲ್ನ ಅಗ್ಗದ ಪೋಸ್ಟ್ಪೇಯ್ಡ್ ಯೋಜನೆ 399 ರೂ. ಆಗಿದ್ದು, ಮುಂದಿನ ದಿನಗಳಲ್ಲಿ ಇದು 499 ರೂ. ಆಗುವ ಸಾಧ್ಯತೆಯಿದೆ.


ಏರ್ಟೆಲ್ ಮೆಂಥ್ಲಿ ರೆಂಟಲ್ ಯೋಜನೆ 499 ರೂ.ನಲ್ಲಿ ಗ್ರಾಹಕರಿಗೆ 75 ಜಿಬಿ ಡೇಟಾ ಹಾಗೂ ಉಚಿತ ಕರೆಯ ಪ್ರಯೋಜನ ಸಿಗಲಿದೆ. ಇದಲ್ಲದೆ,ಮೂರು ತಿಂಗಳ ನೆಟ್ಫ್ಲಿಕ್ಸ್ ಮತ್ತು ಒಂದು ವರ್ಷದ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇದಲ್ಲದೆ 499 ರ ಈ ಪೋಸ್ಟ್ಪೇಯ್ಡ್ ಯೋಜನೆಯಲ್ಲಿ, ಬಳಕೆದಾರರಿಗೆ Zee5 ಮತ್ತು ಏರ್ಟೆಲ್ ಎಕ್ಸ್ಟ್ರೀಮ್ ಆ್ಯಪ್ನ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.


ಇನ್ನು ಪ್ರಿಪೇಯ್ಡ್ ಗ್ರಾಹಕರಿಗೂ ಟ್ಯಾರಿಫ್ ದರ ಏರಿಕೆ ಬಿಸಿ ತಟ್ಟಲಿದ್ದು, ಮುಂದಿನ ತಿಂಗಳಿಂದ ಏರ್ಟೆಲ್ ರಿಚಾರ್ಜ್ ದರಗಳಲ್ಲಿ ಶೇ.20 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.


ಅಂದರೆ ನೀವು 399 ಪ್ಲ್ಯಾನ್ ರಿಚಾರ್ಜ್ ಮಾಡಿಕೊಳ್ಳುತ್ತಿದ್ದರೆ ಮುಂದಿನ ತಿಂಗಳಿಂದ ಅದು 479 ರೂ. ಆಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ದರ ಹೆಚ್ಚಳವೇಕೆ?


ವೊಡಾಫೋನ್ ಮತ್ತು ಏರ್ಟೆಲ್ ದರಗಳ ಹೆಚ್ಚಳವೇಕೆ? ವೊಡಾಫೋನ್-ಐಡಿಯಾ ಕಂಪನಿಯು ಡಿಸೆಂಬರ್ 1, 2019 ರಿಂದ ತನ್ನ ಸೇವ ದರವನ್ನು ಹೆಚ್ಚಿಸುತ್ತೇವೆ ಎಂದು ಹೇಳಿದೆ. ಭಾರತದಲ್ಲಿ ಮೊಬೈಲ್ ಡೇಟಾ ಶುಲ್ಕಗಳು ವಿಶ್ವದ ಅತ್ಯಂತ ಕಡಿಮೆ ದರದಲ್ಲಿವೆ. ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಡೇಟಾ ಸೇವೆಗಳ ಅಗತ್ಯಕ್ಕೆ ಅನುಸಾರವಾಗಿ ಚಂದಾದಾರರಿಗೆ ಕಡಿಮೆ ಬೆಲೆಗೆ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಆದರೆ ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದಂತೆ ಏರ್ಟೆಲ್, ವೊಡಾಫೋನ್-ಐಡಿಯಾ ಮತ್ತು ಇತರ ಟೆಲಿಕಾಂ ಆಪರೇಟ್ ಕಂಪೆನಿಗಳು ಸರ್ಕಾರಕ್ಕೆ 1.4 ಲಕ್ಷ ಕೋಟಿ ರೂ.ಗಳನ್ನು ಪಾವತಿಸಬೇಕಾಗಿದೆ.


ಟೆಲಿಕಾಂ ಕಂಪೆನಿಗಳ ವಾರ್ಷಿಕ ಹೊಂದಾಣಿಕೆಯ ಒಟ್ಟು ಆದಾಯವನ್ನು (ಎಜಿಆರ್) ಲೆಕ್ಕಾಚಾರ ಮಾಡುವಲ್ಲಿ ದೂರಸಂಪರ್ಕೇತರ ವ್ಯವಹಾರಗಳಿಂದ ಬರುವ ಆದಾಯವನ್ನು ಸೇರಿಸುವ ಕುರಿತು ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎತ್ತಿಹಿಡಿದಿದೆ.


ಅದರಲ್ಲಿ ಒಂದು ಭಾಗವನ್ನು ಬೊಕ್ಕಸಕ್ಕೆ ಪರವಾನಗಿ ಮತ್ತು ಸ್ಪೆಕ್ಟ್ರಮ್ ಶುಲ್ಕವಾಗಿ ಪಾವತಿಸಲಾಗುತ್ತದೆ. ನ್ಯಾಯಾಲಯಕ್ಕೆ ಸಲ್ಲಿಸಿದ ಸಂಖ್ಯೆಗಳ ಪ್ರಕಾರ, ಭಾರ್ತಿ ಏರ್ಟೆಲ್ 21,682 ಕೋಟಿ ಹಾಗೂ ವೋಡಾಫೋನ್ ಐಡಿಯಾ 19,823 ಕೋಟಿ ಹಾಗೂ ರಿಲಾಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ. ಈ ಹಿನ್ನಲೆಯಲ್ಲಿ ಟ್ಯಾರಿಫ್ ದರದಲ್ಲಿ ಹೆಚ್ಚಳ ಮಾಡಲು ಕಂಪೆನಿಗಳು ಮುಂದಾಗಿವೆ.