ಮಹಮ್ಮದ್ ಇರ್ಫಾನ್ ಬಂಧಿತ ಆರೋಪಿ. ಆಡುಗೋಡಿಯಲ್ಲಿ ತಾಯಿ, ಅಣ್ಣನ ಜೊತೆಯಲ್ಲಿ ಇರ್ಫಾನ್ ವಾಸವಾಗಿದ್ದನು. ನಿರುದ್ಯೋಗಿಯಾಗಿದ್ದ ಇರ್ಫಾನ್ ತಿಂದು ತಿರುಗಾಡುತ್ತಿದ್ದನು. ಉಂಡಾಡಿ ಗುಂಡನಂತಿದ್ದ ಇರ್ಫಾನ್ಗೆ ಪ್ರೇಯಸಿ ಸಹ ಒಬ್ಬಳಿದ್ದಳು. ಮನೆಯಲ್ಲಿ ಊಟ ಮಾಡೋದು ಆಕೆ ಜೊತೆ ಸುತ್ತಾಡೋದನ್ನ ಇರ್ಫಾನ್ ಕಾಯಕ ಮಾಡಿಕೊಂಡಿದ್ದನು. ಹೀಗೆ ಒಂದು ದಿನ ಪ್ರೇಯಸಿಗೆ ನಿನ್ನ ಆಸೆ ಏನು ಎಂದು ಕೇಳಿದ್ದಾನೆ. ಈ ವೇಳೆ ಆಕೆ ಗೋವಾ ಸುತ್ತಾಡಬೇಕು ಎಂದು ಹೇಳಿದ್ದಾಳೆ. ಕೈಯಲ್ಲಿ ಹಣ ಇಲ್ಲದೇ ಮನೆಗೆ ಭಾರವಾಗಿದ್ದ ಇರ್ಫಾನ್ಗೆ ಪ್ರೇಯಸಿಯ ಆಸೆ ಈಡೇರಿಸಲು ಕಳ್ಳತನಕ್ಕೆ ಪ್ಲಾನ್ ಮಾಡಿದ್ದಾನೆ. ಅದು ತನ್ನದೇ ಮನೆಗೆ ಕನ್ನ ಹಾಕಿದ್ದಾನೆ. ಮನೆಯಲ್ಲಿರುವ 103 ಗ್ರಾಂ ಚಿನ್ನಾಭರಣ ಕಾಣದಿದ್ದಾಗ ಇರ್ಫಾನ್ ಸೋದರ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ ಪೊಲೀಸರು, ಇರ್ಫಾನ್ ಎಲ್ಲಿ ಎಂದು ಕೇಳಿದ್ದಾರೆ. ಆತ ಗೆಳೆಯರ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ. ಇರ್ಫಾನ್ ಬೆನ್ನತ್ತಿ ಗೋವಾ ತೆರಳಿದ ಪೊಲೀಸರು ಗೆಳತಿ ಜೊತೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದ ರೋಮಿಯೋನನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ.