ಸ್ಕಾಡಾ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆ ಕಾರ್ಯಕ್ರಮವನ್ನು ಜನವರಿ 19 ರಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಹಮ್ಮಿಕೊಳ್ಳಗಿದೆ.ಕೊಡೇಕಲ್ ಗ್ರಾಮವು ಕಾಲಜ್ಞಾನಿ ಬಸವೇಶ್ವರರ ಭೂಮಿಯಾಗಿದೆ. ಕೊಡೇಕಲ್ ಗ್ರಾಮವು ಸುರಪುರ ಶಾಸಕ ರಾಜುಗೌಡ ಸ್ವಗ್ರಾಮವಾಗಿದೆ. ಕೊಡೇಕಲ್ ಗ್ರಾಮದ ಹೊರಭಾಗದಲ್ಲಿಯೇ ಸ್ಕಾಡಾ ಯೋಜನೆ ಹಾಗೂ ಬಹು ಗ್ರಾಮ ಕುಡಿಯುವ ನೀರು ಉದ್ಘಾಟನೆಕಾರ್ಯಕ್ರಮಕ್ಕೆ ಪಿಎಂ ಮೋದಿ ಅವರು ಆಗಮಿಸಲಿದ್ದಾರೆ.
ಯಾದಗಿರಿ ಜಿಲ್ಲೆಯು ನೀರಿನ ಬವಣೆಯಿಂದ ಬಳಲುತಿತ್ತು.ಜನರು ನೀರಾವರಿ ಸೌಲಭ್ಯದಿಂದ ವಂಚಿತರಾಗಿ ಸಂಕಷ್ಟ ದ ಜೀವನ ನಡೆಸುತ್ತಿದ್ದರು. ಹೀಗಾಗಿ,ಯಾದಗಿರಿ ಜಿಲ್ಲೆಯು ಈಗಿನ ಕಲಬುರಗಿ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಈ ಭಾಗದ ನೀರಾವರಿ ಬವಣೆ ಅರಿತು ಅಂದಿನ ಎಸ್ .ನಿಜಲಿಂಗಪ್ಪ ಸರಕಾರ ಕೃಷ್ಣಾ ನದಿಗೆ ಅಡ್ಡಲಾಗಿ ಈಗಿನ ಹುಣಸಗಿ ತಾಲೂಕಿನ ನಾರಾಯಣಪುರ ಸಮೀಪದಲ್ಲಿ ನಾರಾಯಣಪುರ ಡ್ಯಾಂ ನಿರ್ಮಾಣ ಮಾಡುವ ಕನಸು ಕಟ್ಟಿಕೊಂಡಿದರು.
1964 ರಲ್ಲಿ ಕೇಂದ್ರ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಡ್ಯಾಂ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು.ನಂತರ 1982 ರಲ್ಲಿ ಅಂದಿನ ಸಿಎಂ ಆರ್.ಗುಂಡುರಾವ್ ಸರಕಾರ ಡ್ಯಾಂ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಿದರು.ನಾರಾಯಣಪುರ ಡ್ಯಾಂಗೆ ಬಸವಸಾಗರ ಜಲಾಶಯವೆಂದು ನಾಮಕರಣ ಮಾಡಲಾಗಿದೆ. ಇದರಿಂದ ಕಲಬುರಗಿ, ಯಾದಗಿರಿ, ವಿಜಯಪುರ,ರಾಯಚೂರು ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಾಣಿತ್ತು.ಯಾದಗಿರಿ ಜಿಲ್ಲೆಯ ರೈತರ ಬರದ ಬವಣೆ ನಿವಾರಣೆಯಾಗಿತ್ತು.
ಗೇಟ್ ಗಳ ಸಮಸ್ಯೆ ಅರಿತು,ಕೇಂದ್ರ ಸರಕಾರ ರಾಷ್ಟ್ರೀಯ ಜಲ ಮಿಷನ್ ಮೂಲಕ ರಾಜ್ಯ ಸರಕಾರದ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ಸ್ಕಾಡಾ ಯೋಜನೆ ಜಾರಿಗೆ ತಂದಿದೆ.ಜಿಐಎಸ್ ಆಧಾರಿತ ಸ್ವಯಂಚಾಲಿತ ಯಾಂತ್ರೀಕೃತ ಹೈಟೆಕ್ ತಂತ್ರಜ್ಞಾನದೊಂದಿಗೆ ಪಿಎಂ ಮೋದಿ ಸರಕಾರ ಸ್ಕಾಡಾ ಗೇಟ್ ಅಳವಡಿಕೆ ಮಾಡಿದೆ. ರಾಜ್ಯ ಸರಕಾರ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಸ್ಕಾಡಾ ಗೇಟ್ ಅಳವಡಿಕೆ ಮಾಡಿದೆ.ಕೇಂದ್ರ ಸರಕಾರ 70 ಪ್ರತಿಶತ ಹಾಗೂ ರಾಜ್ಯ ಸರಕಾರ 30 ಪ್ರತಿಶತ ಅನುದಾನದೊಂದಿಗೆ 1180 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕಾಡಾ ಯೋಜನೆ ಮೂಲಕ ಹೈಟೆಕ್ ಗೇಟ್ ಅಳವಡಿಕೆ ಮಾಡಲಾಗಿದೆ.
ನಾರಾಯಣಪುರ ಹಾಗೂ ಭೀಮರಾಯನಗುಡಿಯಲ್ಲಿ ಕಂಟ್ರೋಲ್ ಸ್ಟೆಷನ್ ಇದ್ದು ಕಂಟ್ರೋಲ್ ಸ್ಟೆಷನ್ ಮೂಲಕವೇ ಕುಳಿತ ಜಾಗದಿಂದಲೇ ಸೆನ್ಸಾರ್ ಮೂಲಕ ದೂರದ ಜಾಗದಿಂದ ಕಾಲುವೆ ಗೇಟ್ ಮಾನಿಟರ್ ಮಾಡಿ ಗೇಟ್ ಓಪನ್ ಮಾಡಿ ನೀರು ಹರಿಸಬಹುದಾಗಿದೆ.ನೀರು ಬೇಡವೆಂದರೆ ಗೇಡ್ ಬಂದ್ ಮಾಡಲಾಗುತ್ತದೆ. ಈಗ ನಾರಾಯಣಪುರ ಎಡದಂಡೆಯು 4.5 ಲಕ್ಷ ಹೆಕ್ಟೇರ್ ನೀರಾವರಿ ವ್ಯಾಪ್ತಿ ಹೊಂದಿದ್ದು,ರೈತರಿಗೆ ನೀರಾವರಿ ಬೆಳೆ ಬೆಳೆಯಲು ಅನುಕೂಲವಾಗಿದೆ.ಪರಿಣಾಮ ಆಹಾರ ಉತ್ಪಾದನೆ ಹೆಚ್ಚಳ ಜೊತೆ ರೈತರ ಆದಾಯ ಹೆಚ್ಚಲಿದೆ.
ಈ ಬಗ್ಗೆ ನಾರಾಯಣಪುರ ಡ್ಯಾಂ ಸಿಇ ಮಂಜುನಾಥ ಮಾತನಾಡಿ, ನಾರಾಯಣಪುರ ಎಡದಂಡೆ ವ್ಯಾಪ್ತಿಯಲ್ಲಿ 4.5 ಲಕ್ಷ ಹೆಕ್ಟೇರ್ ನೀರಾವರಿ ಕ್ಷೇತ್ರವಿದೆ.ಈ ಹಿಂದಿನ ಗೇಟ್ ಗಳಿಂದ ಬಳಕೆ ಕಷ್ಟವಿತ್ತು.ಸ್ಕಾಡಾ ಯೋಜನೆಯಿಂದ ನೀರು ಪೋಲಾಗುವುದು, ಸರಾಗವಾಗಿ ನೀರು ಬಿಡುಗಡೆ, ಸಮಾನ ನೀರು ಬಿಡುಗಡೆ ಸೇರಿದಂತೆ ಅನೇಕ ಅನುಕೂಲವಿದೆ ಎಂದರು. ಈ ಬಗ್ಗೆ ಶಾಸಕ ರಾಜುಗೌಡ ಅವರು ಮಾತನಾಡಿ, ಸ್ಕಾಡಾ ಯೋಜನೆಯಿಂದ ಕೊನೆಭಾಗದ ರೈತರಿಗೆ ನೀರು ತಲುಪಿಸಲಾಗುತ್ತಿದೆ.ನೀರಾವರಿಗೆ ಅನುಕೂಲವಾಗಿದೆ.ಇಂತಹ ಬೃಹತ್ ಕಾಮಗಾರಿಯನ್ನು ಮೋದಿ ಅವರು ಉದ್ಘಾಟನೆ ಮಾಡುವದು ಖುಷಿ ತಂದಿದ್ದು,ಮೋದಿ ಆಗಮನಕ್ಕೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು.