ಕರ್ನಾಟಕದ 17 ಶಾಸಕರನ್ನು ಅನರ್ಹ ಮಾಡಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ನೀಡಿದ್ದ ಅನರ್ಹತೆ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ. ಅದರ ಜತೆಜತೆಗೆ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೂ ಸುಪ್ರೀಂ ಕೋರ್ಟ್ ನೀಡಿದೆ. ಈ ಮೂಲಕ ಸ್ಪೀಕರ್ ಆದೇಶಕ್ಕೂ ಕೋರ್ಟ್ ಮನ್ನಣೆ ನೀಡುತ್ತಲೇ, ಅನರ್ಹ ಶಾಸಕರ ಮನವಿಗೂ ಸ್ಪಂದಿಸಿದೆ. ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರಿರುವ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ಆಲಿಸಿ ಆದೇಶವನ್ನು ಕಾಯ್ದಿರಿಸಿತ್ತು. ಅದರಂತೆ ಇಂದು ಮುಂಜಾನೆ ಸರಿಯಾಗಿ 10.30ಕ್ಕೆ ತೀರ್ಪನ್ನು ನೀಡಿದೆ. "17 ಶಾಸಕರ ಅನರ್ಹತೆ ಎತ್ತಿ ಹಿಡಿದಿದ್ದೇವೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದೇವೆ. 2023ರವರೆಗೂ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧ ಹೇರುವುದು ಸರಿಯಲ್ಲ," ಎಂದು ಕೋರ್ಟ್ ಹೇಳಿದೆ.
ಶಾಸಕರ ಅನರ್ಹತೆಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಗತ ಮಾಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಪಾಕ್ಷಿಕವಾಗಿ ಎತ್ತಿಹಿಡಿದಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ತಾನು ಸ್ವಾತಿಸುತ್ತೇನೆ ಎಂದು ಮಾಜಿ ಸಿಎಂ ಹೇಳಿದ್ಧಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಹೊರಬಂದ ಬೆನ್ನಲ್ಲೇ ಬೆಳಗ್ಗೆ 11:30ಕ್ಕೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಸ್. ಸಿದ್ದರಾಮಯ್ಯ, ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಜನರೇ ಅವರನ್ನು ಸೋಲಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ
ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಹೊಂದಿದ್ದಾರೆ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಅವರಿಗೆ ಉಪಚುನಾವಣೆಯ ಅಭ್ಯರ್ಥಿಯಾಗಿ ಟಿಕೆಟ್ ನೀಡಲು ಆಡಳಿತ ಪಕ್ಷ ಬಿಜೆಪಿ ತೀರ್ಮಾನಿಸಿದೆ. ಅನರ್ಹ ಶಾಸಕರು ಪಕ್ಷ ಸೇರ್ಪಡೆ ಬಳಿಕ ಅವರನ್ನು ಅಭ್ಯರ್ಥಿ ಎಂದು ಘೋಷಿಸಲು ಪಕ್ಷ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಾಯಕರು ಈ ತೀರ್ಮಾನ ಕೈಕೊಂಡಿದ್ದಾರೆ. ಅನರ್ಹ ಶಾಸಕರು ನಾಳೆ ಪಕ್ಷ ಸೇರ್ಪಡನೆಯಾದ ಬಳಿಕ ಅವರಿಗೆ ಟಿಕೆಟ್ ನೀಡಲಾಗುವುದು. ಯಾರಿಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ನಾಯಕರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರ ನಡುವೇ ಮತ್ತೆ ಶೀತಲ ಸಮರ ಶುರುವಾಗಿದೆ. ಕರ್ನಾಟಕ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೆಕ್ಯುಲರಿಸಂ ಎಲ್ಲಿದೆ? ಎಂದು ಕೇಳಿದ್ದ ಸಿದ್ದರಾಮಯ್ಯಗೆ ದೇವೇಗೌಡರು ತಪರಾಕಿ ಬಾರಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್ಗೆ ಸೆಕ್ಯುಲರಿಸಂ ಎಲ್ಲಿದೆ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ನಾವು ನಮ್ಮ ಸೆಕ್ಯೂಲರಿಸಂ ಅನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ವರ್ಗಾಯಿಸಿದ್ದೇವೆ. ರಾಹುಲ್ ಗಾಂಧಿ ಬಳಿ ನಮ್ಮ ಸೆಕ್ಯೂಲರಿಸಂ ವಾಪಸ್ ಪಡೆಯುವ ಕಾಲ ಬರುತ್ತದೆ. ನನ್ನೊಂದಿಗೆ ರಾಜಕೀಯ ಮಾಡುವಾಗ ಸಿದ್ದರಾಮಗೆ ಸೆಕ್ಯುಲರಿಸಂ ಗೊತ್ತಿರಲಿಲ್ಲವೇ? ಸಿದ್ದರಾಮಯ್ಯ ಯಾರು? ಇವರು ಎಲ್ಲಿಂದ ಬದರು? ಎಂಬುದು ಸದ್ಯದಲ್ಲೇ ಹೇಳುತ್ತೇನೆ ಎಂದು ಕಿರಿಕಾರಿದರು.
ಬಿಜೆಪಿ ಮುಖಂಡರಾಗಿದ್ದ ಶರತ್ ಬಚ್ಚೇಗೌಡ ಅವರು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮೂಲಕ ಬಿಜೆಪಿಗೆ ಮೊದಲ ಬಂಡಾಯ ಎದುರಾದಂತೆ ಆಗಿದೆ. ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಹೀಗಾಗಿ ಹೋಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಲಿದೆ. ಪಕ್ಷ ಬಿಟ್ಟು ಬಂದವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ಈ ಹಿಂದೆಯೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಶರತ್ ಬಚ್ಚೇಗೌಡ ಪಕ್ಷ ತೊರೆಯುವ ಸೂಚನೆಯನ್ನು ನೀಡಿದ್ದರು. ಅದರಂತೆ ಇದೀಗ ನಾಳೆ ಬಂಡಾಯ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಶರತ್ ಅವರಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ ಬಹುತೇಕ ಉಪಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಬಂಡಾಯದ ಕಾವು ಎದುರಾಗಲಿದೆ.
ಸಂವಿಧಾನ ದಿನಾಚರಣೆಯ ಸುತ್ತೋಲೆಯಲ್ಲಿ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣದಲ್ಲಿ ಒಂದು ದೊಡ್ಡ ತಲೆದಂಡವಾಗಿದೆ. ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಮಣಿ ಅವರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ಮೇರೆಗೆ ಈ ಅಮಾನತಿಗೆ ಆದೇಶಿಸಲಾಗಿದೆ. ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ವಿಚಾರವನ್ನು ಒತ್ತಿ ಹೇಳಲಾಗಿತ್ತು. ಕೋರಮಂಗಲದ ಸಿಎಂಸಿಎ ಎಂಬ ಖಾಸಗಿ ಸಂಸ್ಥೆ ಈ ಕೈಪಿಡಿ ತಯಾರಿಸಿರುವುದು ತಿಳಿದುಬಂದಿದೆ.
ಕನ್ನಡ ಕಲಿಕಾ ಕಾಯ್ದೆಯ ಅನ್ವಯ ಕನ್ನಡ ಭಾಷೆ ಕಲಿಸದ ಶಾಲೆಗಳ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದರು. ಶೇ. 90ರಷ್ಟು ಸಿಬಿಎಸ್ಸಿ, ಐಸಿಎಸ್ಇ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸಲಾಗುತ್ತಿಲ್ಲ. ಇಷ್ಟೂ ಶಾಲೆಗಳ ಮಾನ್ಯತೆ ರದ್ದು ಮಾಡುವ ನೋಟೀಸನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದವರು ತಿಳಿಸಿದರು. 2017ರಲ್ಲಿ ಕನ್ನಡ ಕಲಿಕಾ ಕಾಯ್ದೆ ಜಾರಿಗೆ ಬಂದಿದೆ. ಎಲ್ಲಾ ಶಾಲೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕನ್ನಡವನ್ನು ಕಲಿಸಬೇಕೆಂಬುದು ಈ ಕಾಯ್ದೆಯ ಧ್ಯೇಯೋದ್ದೇಶವಾಗಿದೆ. ಈ ಕಾಯ್ದೆ ವಾಸ್ತವದಲ್ಲಿ ಎಷ್ಟರಮಟ್ಟಿಗೆ ಜಾರಿಯಲ್ಲಿದೆ ಎಂಬುದರ ಚರ್ಚೆ ನಡೆಸಲು ಇವತ್ತು ಸಭೆ ಕರೆದಿದ್ದೆವು. ಈಗಾಗಲೇ ಎರಡು ಪ್ರಮುಖ ಸಭೆಗಳನ್ನು ಮಾಡಿದ್ದೇವೆ. ಕನ್ನಡ ಕಲಿಸದ ಶಾಲೆಗಳ ಮೇಲೆ ಕಣ್ಣಿಡಲು ಉನ್ನತ ಪರಿಶೀಲನಾ ಸಮಿತಿ ರಚಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ನಾನು ಮೊದಲಾದವರು ಈ ಸಭೆಯಲ್ಲಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಸಿನಿಮಾ ಟೀಸರ್ ಮತ್ತು ಪೋಸ್ಟರ್ ಮೂಲಕವೇ ಭಾರೀ ಕುತೂಹಲ ಮೂಡಿಸಿತ್ತು. ಈ ಸಸ್ಪೆನ್ಸ್-ಹಾರರ್ ಸಿನಿಮಾದ 5 ಭಾಷೆಗಳ ಟ್ರೈಲರ್ ನಿನ್ನೆ ಸಂಜೆ ಬಿಡುಗಡೆಯಾಗಿದೆ. ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಸಿನಿಮಾ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿರುವುದು ವಿಶೇಷ. ಈ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿರುವ ರಾಧಿಕಾಗೆ ನಟ ದರ್ಶನ್ ಸಾಥ್ ನೀಡಿದ್ದಾರೆ. 5 ವರ್ಷಗಳ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. 'ದಮಯಂತಿ', 'ಭೈರಾದೇವಿ', 'ಕಾಂಟ್ರಾಕ್ಟ್' ಸಿನಿಮಾಗಳಲ್ಲಿ ನಟಿಸುತ್ತಿರುವ ರಾಧಿಕಾ ಅವರ 'ದಮಯಂತಿ' ಸಿನಿಮಾ ಈ ತಿಂಗಳ ಅಂತ್ಯದಲ್ಲಿ ತೆರೆ ಕಾಣಲಿದೆ.
ಬಾಂಗ್ಲಾದೇಶದೊಂದಿಗಿನ ಟಿ-20 ಸಿರೀಸ್ ಪಂದ್ಯದಿಂದ ಬಿಡುವು ಪಡೆದಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಕ್ಕಳೊಂದಿಗೆ ರಸ್ತೆಯ ಗಲ್ಲಿಯಲ್ಲಿ ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ. ಇಂದೋರ್ನ ಬಿಚೋಲಿ ಮರ್ದಾನ ಪ್ರದೇಶದಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ವಿರಾಟ್ ಸಂಭ್ರಮಿಸಿದ್ದಾರೆ. ಕ್ಯಾಶಯಲ್ ಡ್ರೆಸ್ನಲ್ಲಿ ಕ್ರಿಕೆಟ್ ಹಿಡಿದ ವಿರಾಟ್ ಜೊತೆ ಆಡವಾಡಿ ಮಕ್ಕಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.