ನಾರಾಯಣ ಗುರುಗಳ ಸ್ಥಬ್ಧ ಚಿತ್ರಕ್ಕೆ ಅವಕಾಶ ಸಿಗದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ಕಾಮಾಲೆ ಕಣ್ಣಿಗೆ ನೋಡುವುದೆಲ್ಲಾ ಹಳದಿ ಎಂಬಂತಾಗಿದೆ ಸಿದ್ದರಾಮಯ್ಯ ಅವರ ವರ್ತನೆ. ರಾಜ್ಯದಲ್ಲಿ ಕ್ಯಾಂಟಿನ್ ಗೆ ಹೆಸರಿಡುವಾಗ ಈ ನೆಲದ ಮಹಾ ಪುರುಷರ ಹೆಸರು ಅವರಿಗೆ ನೆನಪಾಗಲಿಲ್ಲ. ಸಿದ್ದರಾಮಯ್ಯಗೆ ಆಗ ನೆನಪಾಗಿದ್ದು ಇಂದಿರಾ ಗಾಂಧಿ ಹೆಸರು ಮಾತ್ರ ಎಂದು ವ್ಯಂಗ್ಯ ಮಾಡಿದ್ದಾರೆ.
ಗಣರಾಜ್ಯೋತ್ಸವದಲ್ಲಿ ಒಂದು ವಿಷಯ ಕೊಟ್ಟಿದ್ದಾರೆ. ಆ ವಿಷಯಕ್ಕೆ ಅನುಗುಣವಾಗಿ ಯಾರು ಸ್ತಬ್ಧ ಚಿತ್ರ ಮಾಡಿರುತ್ತಾರೋ, ಗುಣಮಟ್ಟದ ಆಧಾರದ ಮೇಲೆ ಅದರ ಆಯ್ಕೆ ಆಗುತ್ತದೆ. ಆಯ್ಕೆ ಪ್ರಕ್ರಿಯೆ ಪಾರದಾರ್ಶಕವಾಗಿರುತ್ತೆ. ಇಲ್ಲಿ ಯಾರಿಗೂ ಅವಮಾನ ಮಾಡುವ ಉದ್ದೇಶ ಇರುವುದಿಲ್ಲ. ಸಿದ್ದರಾಮಯ್ಯ ಅವರು ಮೊದಲು ಗಣರಾಜ್ಯೋತ್ಸವದ ಸ್ಥಬ್ಧ ಚಿತ್ರಗಳ ಮಾರ್ಗಸೂಚಿ ಓದಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಜನರನ್ನು ಭೀತಿಯಲ್ಲಿ ಇಡುವುದನ್ನು ಮೊದಲು ಸರಕಾರ ನಿಲ್ಲಿಸಲಿ. ಕರ್ಫ್ಯೂ, ಲಾಕ್ಡೌನ್ನಿಂದ ಜನರಿಗೆ ಬಹಳ ತೊಂದರೆಯಾಗಿದೆ. ಜನರ ಜೀವನ, ಜೀವ ಎರಡು ಮುಖ್ಯ. ಜೀವ ಉಳಿಸಿಕೊಳ್ಳಲು ವ್ಯಾಕ್ಸಿನ್ ಕೊಟ್ಟಿದ್ದೇವೆ. ಈಗ ಜೀವನ ಉಳಿಯಬೇಕಾದರೆ ಕರ್ಫ್ಯೂ, ಲಾಕ್ಡೌನ್ ತೆಗೆಯಿರಿ. ಸಿಎಂ ಈ ಬಗ್ಗೆ ಶುಕ್ರವಾರದ ಸಭೆಯಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಎಲ್ಲಾ ವರ್ಗದ ಜನರಿಗೂ ಕರ್ಫ್ಯೂ, ಲಾಕ್ ಡೌನ್ ನಿಂದ ತೊಂದರೆ ಆಗಿದೆ ಎಂದರು.