ಮಲೆನಾಡಿನಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಚುರುಕುಗೊಂಡಿರುವುದರಿಂದ ಕೃಷಿ ಚಟುವಟಿಕೆಗಳು ಸಹ ಗರಿಗೆದರಿವೆ. ಉತ್ತಮ ಮಳೆಯಾದ ಹಿನ್ನೆಲೆ ಶಿವಮೊಗ್ಗದಲ್ಲಿ ರೈತರು ಭತ್ತ ನಾಟಿ ಮಾಡುವಲ್ಲಿ ನಿರತವಾಗಿದ್ದಾರೆ. ಕೊರೋನಾ ಭೀತಿ ನಡುವೆಯೂ ರೈತರು ಭತ್ತದ ನಾಟಿ ಕಾರ್ಯ ನಡೆಸುತ್ತಿದ್ದಾರೆ. ಕೂಲಿ ಕಾರ್ಮಿಕರ ಸಮಸ್ಯೆ ಸ್ವಲ್ಪ ಮಟ್ಟಿಗೆ ಉದ್ಭವಿಸಿದ್ದು, ಹಲವು ಭಾಗಗಳಲ್ಲಿ ಕುಟುಂಬದವರೇ ಸೇರಿಕೊಂಡು ಭತ್ತ ನಾಟಿ ಕಾರ್ಯ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರ ಕೂಲಿ ದರ ಸಹ ಏರಿಕೆಯಾಗಿದೆ. ಹೀಗಾಗಿ ರೈತರಿಗೆ ಸ್ವಲ್ಪ ಸಂಕಷ್ಟಗಳು ಎದುರಾಗಿವೆ. ಈ ಸಮಸ್ಯೆಗಳ ನಡುವೆಯೂ ವರ್ಷದ ಅನ್ನಕ್ಕಾಗಿ ರೈತರು ಭತ್ತದ ನಾಟಿ ಕೆಲಸ ಆರಂಭಿಸಿದ್ದಾರೆ. ಜಿಲ್ಲೆಯ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ ತಾಲ್ಲೂಕಿನ ಭಾಗದಲ್ಲಿ ಭತ್ತದ ನಾಟಿ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಭೂಮಿಗೆ ನೇಗಿಲಿಳಿಸಿ ರೈತ ಹೊಲ ಗದ್ದೆಗಳನ್ನು ಉಳುತ್ತಿದ್ದಾನೆ. ಕೂಲಿ ಕಾರ್ಮಿಕರು ಸಿಗದ ಕಾರಣ ಈಗ ಯಂತ್ರಗಳ ಕಡೆ ರೈತರು ಹೆಚ್ಚು ಮೋರೆ ಹೋಗಿದ್ದಾರೆ. ಜಿಲ್ಲೆಯ ಒಟ್ಟು 93 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ನಡೆಯಲಿದೆ. ಕೋವಿಡ್-19 ಅತಂಕದ ನಡುವೆಯೂ ರೈತರು ದೇಶಕ್ಕೆ ವರ್ಷದ ಆಹಾರ ಬೆಳೆಯಲು ಕಾರ್ಯ ಪ್ರವೃತ್ತರಾಗಿದ್ದಾರೆ.