ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇಂದು ಆನೇಕಲ್, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿದೆ. ಸತತ ಎರಡನೇ ದಿನವೂ ಸಂಜೆ ವೇಳೆಗೆ ಬೆಂಗಳೂರಿನ ಕೋರಮಂಗಲ, ಕೆಂಗೇರಿ, ಆಡುಗೋಡಿ, ವಿಲ್ಸನ್ ಗಾರ್ಡನ್, ಬನಶಂಕರಿ, ಲಾಲ್ಬಾಗ್, ಕುಮಾರಸ್ವಾಮಿ ಲೇಔಟ್, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಕೆಆರ್ ಮಾರ್ಕೆಟ್, ಶ್ರೀನಗರ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದ ಸಾರ್ವಜನಿಕರು ಮಳೆಯಿಂದ ಸಮಸ್ಯೆ ಎದುರಿಸಿದ್ದಾರೆ.
ಇನ್ನು, ನಿನ್ನೆ ಕೋಲಾರ ಜಿಲ್ಲೆಯಲ್ಲಿ ಸುರಿದ ಭಾರೀ ಗಾಳಿ, ಆಲಿಕಲ್ಲು ಸಹಿತ ಮಳೆಗೆ ಕೋಲಾರ ಜಿಲ್ಲೆಯಾದ್ಯಂತ ಅಂದಾಜು 20 ಕೋಟಿ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಅಂದಾಜು 3,200 ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆನಾಶ ಆಗಿದೆ. ಇದರಲ್ಲಿ 2,900 ಹೆಕ್ಟೇರ್ ಪ್ರದೇಶದಷ್ಟು ಮಾವು, 300 ಹೆಕ್ಟೇರ್ ನಷ್ಟು ಟೊಮೆಟೊ, ಹಿಪ್ಪು ನೇರಳೆ, ಹೂ ಕೋಸು ಬೆಳೆಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕುಮಾರಸ್ವಾಮಿ ಮಾಹಿತಿ ನೀಡಿದ್ದರೆ.
ಕೋಲಾರ ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆನಾಶ ಹಿನ್ನಲೆಯಲ್ಲಿ ರೈತರಿಗೆ ಪರಿಹಾರ ನೀಡುವಂತೆ ಶ್ರೀನಿವಾಸಪುರ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಕೂಡಲೇ ಬೆಳೆಹಾನಿ ವೈಜ್ಞಾನಿಕ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇನ್ನು ಮಳೆಯಿಂದ ಹಾನಿಗೊಳಗಾದ ರೈತರ ತೋಟಗಳಿಗೆ ಶಾಸಕ ರಮೇಶ್ ಕುಮಾರ್ ಭೇಟಿ ನೀಡಿ ಬೆಳೆನಾಶ ವೀಕ್ಷಣೆ ಮಾಡಿದರು. ಅಲ್ಲದೆ, ಸೂಕ್ತ ಪರಿಹಾರ ಕೊಡಿಸುವುದಾಗಿ ರೈತರಿಗೆ ಭರವಸೆ ನೀಡಿದರು.
ವಿಜಯಪುರ ಜಿಲ್ಲೆಯಲ್ಲೂ ಆಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ ನೆಲ ಕಚ್ಚಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡಲು ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಎಂಎಸ್ ರುದ್ರಾಗೌಡ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ವಿಜಯಪುರ ಮಾತ್ರವಲ್ಲದೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ 1500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ನಾಶವಾಗಿದೆ.