ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶಾಸಕ ವೇದವ್ಯಾಸ್ ಕಾಮತ್, ಮುಂದಿನ ಐದು ವರ್ಷಗಳ ಅಭಿವೃದ್ಧಿಯ ಸ್ಪಷ್ಟ ಯೋಜನೆಯೊಂದಿಗೆ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದ್ದು, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ, ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತು, ನಗರದ ನೈರ್ಮಲ್ಯ, ಸಂಚಾರ ವ್ಯವಸ್ಥೆಯ ಸಮಗ್ರ ಸುಧಾರಣೆ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ನಗರವನ್ನು ಇನ್ನಷ್ಟು ಸ್ವಚ್ಛ, ಸುಂದರ ನಗರವನ್ನಾಗಿಸುವ ಚಿಂತನೆ ಇದೆ ಎಂದು ಹೇಳಿದ್ದಾರೆ.
ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ರಿವರ್ ಫ್ರಂಟ್ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು. ಈ ಮೂಲಕ ಉಳ್ಳಾಲ ಸೇತುವೆ ಮೂಲಕ ಸುಲ್ತಾನ್ ಬತ್ತೇರಿ ವರೆಗಿನ ನದಿ ಪಾತ್ರಗಳ ಸಮಗ್ರ ಅಭಿವೃದ್ಧಿಯಾಗಲಿದೆ. ಸುಲ್ತಾನ್ ಬತ್ತೇರಿ- ತಣ್ಣೀರುಬಾವಿ ಪ್ರದೇಶಗಳನ್ನು ಹ್ಯಾಂಗಿಂಗ್ ಬ್ರಿಡ್ಜ್ ಮೂಲಕ ಜೋಡಿಸಿ ಪ್ರವಾಸಿ ಆಕರ್ಷಣೆಗೆ ಯೋಜನೆ ಜಾರಿಗೆ ಬರಲಿದೆ ಎಂದು ಕಾಮತ್ ಹೇಳಿದ್ದಾರೆ.
ಇನ್ನು, ಕುದ್ರುಗಳ ಸುಂದರೀಕರಣ ಮೂಲಕ ಪ್ರವಾಸೀ ಆಕರ್ಷಣೆ ಮಾಡುವ ಚಿಂತನೆ ಇದ್ದು, ಮಂಗಳೂರು ನಗರ ವ್ಯಾಪ್ತಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಯೋಜನೆಯ ಬಗ್ಗೆಯೂ ಪ್ರಯತ್ನ ನಡೆಯಲಿದೆ. ಇದಲ್ಲದೆ ಹಿನ್ನೀರಿನ ಸಮಗ್ರ ಬಳಕೆ ಮೂಲಕ ಪ್ರವಾಸಿಗರ ಆಕರ್ಷಣೆಗೆ, ಬೋಟ್ ಟೂರಿಸಂ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು. ವಿದೇಶಿ ಹಾಗೂ ದೇಶೀ ಪ್ರವಾಸಿಗರ ಆಕರ್ಷಣೆಗೆ ಹೆಲಿಪೋರ್ಟ್ ನಿರ್ಮಾಣ ಮೂಲಕ ಹೈಟೆಕ್ ಮಾದರಿಯ ಪ್ರವಾಸಿ ಯೋಜನೆ ಇದೆ. ಧಾರ್ಮಿಕ ಪ್ರವಾಸೋದ್ಯಮಗಳ ಅಭಿವೃದ್ಧಿಗೆ `ಸರ್ಕೂಟ್ ಪರಿಕಲ್ಪನೆ' ಯೋಜನೆಯೂ ಇದೆ ಎಂದಿದ್ದಾರೆ.
ಜೊತೆಗೆ, ಮಂಗಳೂರು ನಗರದ ನೈರ್ಮಲ್ಯಕ್ಕೆ ವಿಶೇಷ ಆದ್ಯತೆ ನಿಡಲಾಗುವುದು. ಘನತ್ಯಾಜ್ಯ ನಿರ್ವಹಣೆಗೆ ಅತ್ಯಾಧುನಿಕ ವ್ಯವಸ್ಥೆ ಅಳವಡಿಕೆ, ಪಚ್ಚನಾಡಿಯಲ್ಲಿ ಹಲವಾರು ವರ್ಷಗಳಿಂದ ಡಂಪ್ ಆಗಿರುವ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಗೊಂಡಿದ್ದು, ತ್ವರಿತ ಅನುಷ್ಠಾನಕ್ಕೆ ಕ್ರಮ, ಬೃಹತ್ ಸಮುಚ್ಚಯಗಳಲ್ಲಿ ಸ್ವಂತ ತ್ಯಾಜ್ಯ ನಿರ್ವಹಣೆ ಘಟಕ ಅಳವಡಿಕೆಗೆ ಪ್ರೋತ್ಸಾಹ ನೀಡುವ ಯೋಜನೆ ಇದೆ ಎಂದು ಕಾಮತ್ ಹೇಳಿದ್ದಾರೆ.
ಇನ್ನು, ನಗರದ ಟ್ರಾಫಿಕ್ ವ್ಯವಸ್ಥೆ ಸುಧಾರಣೆ ಮಾಡಲು ಕ್ರಮ ವಹಿಸಲಾಗುತ್ತದೆ. ಹಂಪನಕಟ್ಟೆಯಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಸಮುಚ್ಚಯ ಕಾಮಗಾರಿ ಆರಂಭಗೊಂಡಿದ್ದು, ಇದೇ ಮಾದರಿಯಲ್ಲಿ ಇನ್ನೂ ಕೆಲವು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಗೆ ಆದ್ಯತೆ, ಕಮಾಂಡ್ ಕಂಟ್ರೋಲ್ ಮೂಲಕ ಟ್ರಾಫಿಕ್ ನಿರ್ವಹಣೆ, ಅತ್ಯಾಧುನಿಕ ಮಾದರಿಯ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಕ್ಯಾಮರಾ ಅಳವಡಿಸಿ ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಮಂಗಳೂರು ನಗರಕ್ಕೆ 24*7 ನೀರು ಪೂರೈಸುವ ಜಲಸಿರಿ ಯೋಜನೆ ಅನುಷ್ಠಾನಗೊಂಡಿದ್ದು, ಹಂತ ಹಂತವಾಗಿ ವಲಯವಾರು ನಗರದ ಎಲ್ಲ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ ಆಗಲಿದೆ, ತುಂಬೆ ವೆಂಟೆಡ್ ಡ್ಯಾಂ ನಲ್ಲಿ ಪೂರ್ಣ ಸಾಮರ್ಥ್ಯ ದ 7 ಮೀ ಎತ್ತರದವರೆಗೆ ನೀರನ್ನು ಶೇಖರಿಸುವ ಬಗ್ಗೆ ಕ್ರಮ ಹಾಗೂ ಕುಡಿಯುವ ನೀರಿನ ಮೂಲವನ್ನು ಹೆಚ್ಚಿಸಲು ಹೊಸದಾಗಿ ನಿರ್ಮಿಸಿರುವ ಅಡ್ಯಾರ್ ಡ್ಯಾಮ್ (ಹರೇಕಳ) ನಿಂದ ಹೆಚ್ಚುವರಿ ನೀರಿನ ಬಳಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಮತ್ ಹೇಳಿದ್ದಾರೆ.
ಸೂರಿಲ್ಲದ ಬಡವರಿಗೆ ಸೂರು ಕಲ್ಪಿಸಲು ಹೆಚ್ಚಿನ ಗಮನ ಹರಿಸಲಾಗುವುದು. ಟಿಡಿಆರ್ ಮೂಲಕ ಭೂ ಸ್ವಾಧೀನಪಡಿಸಿ ಆರ್ಥಿಕ ದುರ್ಬಲರಿಗೆ ಸೂರು ಕಲ್ಪಿಸುವ ಯೋಜನೆ ಇದೆ, ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು, ಶಕ್ತಿನಗರ ವಸತಿ ಸಮುಚ್ಚಯ ಯೋಜನೆಗೆ ಇದ್ದ ಕಾನೂನು ಅಡೆತಡೆಗಳು ನಿವಾರಣೆಗೊಂಡಿದ್ದು ಶೀಘ್ರದಲ್ಲಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ಅನೇಕರಿಗೆ ಸೂರಿನ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು.
ಮಂಗಳೂರು ನಗರ ದೇಶದಲ್ಲೇ ಶೈಕ್ಷಣಿಕ ಹಬ್ ಆಗಿ ಗುರುತಿಸಿಕೊಂಡಿದ್ದು, ಇಲ್ಲಿನ ಶಿಕ್ಷಣ ವ್ಯವಸ್ಥೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ, ಮಂಗಳೂರಿನಲ್ಲಿ ಮೀನುಗಾರಿಕಾ ವಿಶ್ವ ವಿದ್ಯಾಲಯ ಸ್ಥಾಪನೆಗೆ ಯತ್ನ, ನಗರ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ಪರಿಸರದ ಸುಧಾರಣೆಗೆ `ಸ್ಕೂಲ್ ಝೋನ್' ಪರಿಕಲ್ಪನೆ ಜಾರಿ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಇನ್ನಷ್ಟು ಶಾಲೆಗಳ ಅಭಿವೃದ್ಧಿಗೆ ಕ್ರಮ. ನಗರದ ಶಾಲಾ ಕಾಲೇಜುಗಳಿಗೆ ಬರುವ ಹೊರ ಜಿಲ್ಲಾ, ಹೊರ ರಾಜ್ಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ಕಾಮತ್ ಹೇಳಿದ್ದಾರೆ.
ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಗಳಲ್ಲಿ ಒಂದಾಗಿಸಲು ಈಗಾಗಲೇ ಸರಕಾರ ಮಟ್ಟದಲ್ಲಿ ಪ್ರಯತ್ನ ನಡೆದಿದ್ದು, ಅದಕ್ಕೆ ಇನ್ನಷ್ಟು ಒತ್ತಡ ತರುವ ಪ್ರಯತ್ನ. ಕಳೆದ ಐದು ವರ್ಷಗಳಲ್ಲಿ ನಗರದಲ್ಲಿ ಬಹುತೇಕ ಶಾಂತಿ ಸುವ್ಯವಸ್ಥೆ ನೆಲೆಸಿದ್ದು, ಕೋಮು ಸೌಹಾರ್ದತೆಗೆ ವಿಶೇಷ ಆದ್ಯತೆ. ಗ್ರೀನ್ ಸಿಟಿ ಪರಿಕಲ್ಪನೆಗೆ ಒತ್ತು, ನಗರದಲ್ಲಿ ಹೂ ತೋಟ, ತಾರಸಿತೋಟ ಸಾವಯವ ಬೆಳೆಗೆ ಪ್ರೋತ್ಸಾಹ ನೀಡಲು ಕ್ರಮ ಎಂದು ವೇದವ್ಯಾಸ್ ಕಾಮತ್ ಹೇಳಿದ್ದಾರೆ.