ಹೀಗೆ ಗುಜರಿಗೆ ಸೇರಲಿದ್ದ ಸರ್ಕಾರಿ ಬಸ್ಸಿಗೆ ಹೊಸ ರೂಪ ಕೊಟ್ಟು ತಾನು ಕಲಿತ ಶಾಲೆ ಉಳಿಸಲು ಪ್ರಯತ್ನಿಸುತ್ತಿರುವ ಈ ಕಲಾವಿದನ ಹೆಸರು ಪ್ರಶಾಂತ್ ಆಚಾರ್ಯ. ಕುಂದಾಪುರ ತಾಲೂಕಿನ ಬಗ್ವಾಡಿ ನಿವಾಸಿ. ಇದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ. ಲಾಕ್ ಡೌನ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ಸಿನ ಮಾದರಿಯನ್ನ ಫೋಮ್ ಶೀಟ್ ನಲ್ಲಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಪ್ರಶಾಂತ್ ಸಚಿವರನ್ನು ಭೇಟಿ ಮಾಡಿ ಒಂದು ಬೇಡಿಕೆ ಇಡ್ತಾರೆ. ಅದು ತಾನು ಕಲಿತ ಶಾಲೆಗೊಂದು ಕಟ್ಟಡ. ಹೌದು, ಹೀಗೊಂದು ಬೇಡಿಕೆ ಇಟ್ಟ ಪ್ರಶಾಂತ್ ಗೆ ಮಾಜಿ ಸಚಿವರು ನಿರಾಸೆ ಮಾಡಲ್ಲ. ಆದಷ್ಟು ಬೇಗ ಶಾಲೆಗೊಂದು ಕಟ್ಟಡ ನಿರ್ಮಿಸುವ ಭರವಸೆ ನೀಡ್ತಾರೆ. ಜೊತೆಗೆ ಬಳಕೆಯಾಗದ ಸರ್ಕಾರಿ ಬಸ್ ನೀಡುತ್ತೇವೆ ಅದನ್ನೇ ತರಗತಿಯಾಗಿ ಮಾರ್ಪಡಿಸಿ ಅಂತ ಸಲಹೆ ಕೊಡ್ತಾರೆ.
ಕೂಡಲೇ ಒಂದು ಬಸ್ ನ್ನು ಶಾಲೆ ಆವರಣಕ್ಕೆ ತಂದು ಒಂದು ಬದಿ ಗುರುಕುಲ ಪದ್ದತಿಯಿಂದ ನಡೆದು ಬಂದ ಶಿಕ್ಷಣ ಹಾಗೂ ಶೈಕ್ಷಣಿಕ ಮಹತ್ವ ಸಾರುವ ಚಿತ್ರ ಹಾಗೂ ಇನ್ನೊಂದು ಬದಿ ಕರಾವಳಿಯ ಕಲೆಯ ಸೊಡಗು ಚಿತ್ರ ನಿರ್ಮಿಸಿ ಒಳಭಾಗದಲ್ಲಿ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು ಹೀಗೆ ದೇಶ ಭಕ್ತರ ಭಾವಚಿತ್ರ ಜೊತೆಗೆ ಪ್ರಾಜೆಕ್ಟರ್ ಮತ್ತು ಬೆಂಚುಗಳು, ಫ್ಯಾನ್ ಹೀಗೆ ಎಲ್ಲವನ್ನ ಅಳವಡಿಸಿ 2 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಬಸ್ಸಾಗಿ ನಿರ್ಮಾಣ ಮಾಡ್ತಾರೆ ಪ್ರಶಾಂತ್.
ಇನ್ಮುಂದೆ ಕನ್ನಡ ಶಾಲೆಯ ಈ ಮಕ್ಕಳು ಸ್ಮಾರ್ಟ್ ಆಗಿ ಪಾಠ ಕಲಿಯಲಿದ್ದಾರೆ. ಸದ್ಯ ಶಾಲೆಯಲ್ಲಿ ತಯಾರಾಗಿರುವ ಸ್ಮಾರ್ಟ್ ಬಸ್ಸನ್ನ ರಾಜ್ಯವೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ಸರ್ಕಾರಿ ಕನ್ನಡ ಶಾಲೆ ಉಳಿಸುವಲ್ಲಿ ಶ್ರಮಪಟ್ಟಿರುವ ಪ್ರಶಾಂತ್ ಬೇಡಿಕೆಯನ್ನ ಸರ್ಕಾರ ಇನ್ನಾದ್ರೂ ಗಮನ ಹರಿಸಿ ಬಗ್ವಾಡಿಯ ಈ ಸರ್ಕಾರಿ ಶಾಲೆಗೆ ಒಂದು ಸುಸಜ್ಜಿತ ಕಟ್ಟಡ ತಕ್ಷಣ ಒದಗಿಸಬೇಕಿದೆ