ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಕಾವೇರಮ್ಮನಿಗೆ ನಮಿಸಿ ಉಮ್ಮತ್ತಾಟ್ ನೃತ್ಯ ಮಾಡಿದರು. ಜೊತೆಗೆ ಬೊಳಕ್ಕಾಟ್ ನೃತ್ಯ ಮಾಡಿದರು. ಇನ್ನು ಪುರುಷರು ಬೊಳಕ್ ಆಟ್ ಪ್ರದರ್ಶಿಸಿದರು. ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ಆವರಣದಲ್ಲಿ ಕಂಡು ಬಂದ ಕೊಡವ ಸಾಂಸ್ಕೃತಿಕ ವೈಭವ. ಪುತ್ತರಿ ಹಬ್ಬದ ಅಂಗವಾಗಿ ಭಾನುವಾರ ಮಡಿಕೇರಿಯ ಕೋಟೆ ಆವರಣದಲ್ಲಿ ಪಾಂಡೇರ ಕುಟುಂಬಸ್ಥರು ಆಯೋಜಿಸಿಧ್ದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಪುರುಷರ ಕೊಡವ ಸಾಂಪ್ರದಾಯಿಕ ಉಡುಗೆ ಕುಪ್ಪಿಚಾಲೆ ತೊಟ್ಟು ಕೋಲಾಟ್ ಪ್ರದರ್ಶಿಸಿದರು. ಮಧ್ಯದಲ್ಲಿ ನಿಂತ ತಂಡವು ದುಡಿಕೊಟ್ಟು ಪಾಟ್ ನುಡಿಸುತ್ತಿದ್ದರೆ ಅದರ ತಾಳಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕಿದ ನೃತ್ಯಗಾರರು, ಕೋಲಾಟ್ ಪ್ರದರ್ಶಿಸಿದರು. ಅಲ್ಲದೆ ಶೌರ್ಯದ ನೃತ್ಯವಾಗಿರುವ ಪರಿಯಕಳಿಯನ್ನ ಮಾಡಿ ಎಲ್ಲರ ಮೈನವಿರೇಳುವಂತೆ ಮಾಡಿದರು.
ಹುತ್ತರಿ ದಿನ ಓಂಕಾರೇಶ್ವರ ದೇವಾಲಯದಲ್ಲಿ ತಕ್ಕಮುಖ್ಯಸ್ಥರ ನೇತೃತ್ವದಲ್ಲಿ ಕದಿರು ತೆಗೆಯಲಾಗುತ್ತದೆ. ಮಾರನೆ ದಿನ ನಮ್ಮ ಕುಟುಂಬದವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ ಎಂದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೊಳಕ್ಕಾಟ್ ಮತ್ತು ಉಮ್ಮತ್ತಾಟ್ ನೃತ್ಯ ಮಾಡಿದ ಶಿಲ್ಪಾ ಅವರು ಮಾತನಾಡಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಇದೊಂದು ಸದಾವಕಾಶವಾಗಿದ್ದು, ತೀವ್ರ ಸಂತೋಷವಾಗುತ್ತದೆ ಎಂದು ಅಭಿಪ್ರಾಯಪಟ್ಟರು.