“ವಿರೋಧ ಪಕ್ಷದ ನಾಯಕರಾದ ಬಿ.ಎಸ್. ಯಡಿಯೂರಪ್ಪ ವಿಶ್ವಾಸಮತಕ್ಕೆ ಅವಸರ ಮಾಡುತ್ತಿದ್ದಾರೆ. ಆದರೆ, ಈ ಕುರಿತ ಚರ್ಚೆಯಾಗದೆ ತೀರ್ಮಾನ ತೆಗೆದುಕೊಳ್ಳುವುದು ಸರಿ ಅಲ್ಲ. ಅಧಿಕಾರ ಶಾಶ್ವತ ಅಲ್ಲ, ನಾವು ಇಲ್ಲಿ ಗೂಟ ಹೊಡ್ಕಂಡು ಕೂತಿಲ್ಲ. ಆದರೆ, 14 ತಿಂಗಳ ಸುಭದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದವರು ಯಾರು? ಇಂದು ಜನ ಅಸಹ್ಯಕರ ರಾಜಕೀಯವನ್ನು ನೋಡಲು ಕಾರಣ ಯಾರು? ಎಂಬ ಕುರಿತು ಚರ್ಚೆ ಆಗಲೇಬೇಕು. ಚರ್ಚೆಯಾಗದೆ ಬಹುಮತಕ್ಕೆ ನಾವು ಆಸ್ಪದ ನೀಡುವುದಿಲ್ಲ” ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು
ಮೈತ್ರಿಪಕ್ಷ ನಾಯಕರ ಕ್ರಿಯಾ ಲೋಪ ಪ್ರಸ್ತಾಪಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಶ್ವಾಸ ಮತ ಯಾಚನೆಯ ಗೊತ್ತುವಳಿ ಮೇಲೆ ಚರ್ಚೆ ಪ್ರಾರಂಭವಾದ ನಂತರ ಪಾಯಿಂಟ್ ಆಫ್ ಆರ್ಡರ್ ಎತ್ತಿರುವುದು ಸರಿಯಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಮಾಧುಸ್ವಾಮಿ, ಸುರೇಶ್ ಕುಮಾರ್ ಮೊದಲಾದ ಬಿಜೆಪಿ ಸದಸ್ಯರೂ ಕೂಡ ಇದನ್ನು ಪುನರುಚ್ಚರಿಸಿದರು. ಪಾಯಿಂಟ್ ಆಫ್ ಆರ್ಡರ್ ಮೇಲೆ ಚರ್ಚೆ ನಡೆಸುವ ಮೂಲಕ ವಿಶ್ವಾಸ ಮತಯಾಚನೆಯನ್ನು ವಿಳಂಬ ಮಾಡಲಾಗುತ್ತಿದೆ ಎಂಬುದು ಬಿಜೆಪಿ ಸದಸ್ಯರ ಆಕ್ಷೇಪ.
ಶ್ರೀಮಂತ ಪಾಟೀಲ್ ಸದನಕ್ಕೆ ಹಾಜರಾಗುತ್ತೇನೆ ಎಂದರೂ ಬಿಜೆಪಿ ಬಿಡುತ್ತಿಲ್ಲ. ಇಂಡಿಗೋ ವಿಮಾನದಲ್ಲಿ ಕರೆದೊಯ್ದು ಮುಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಮಲಗಿರೋ ತರ ಫೋಟೊ ಹೊಡೆದು ಫೋಟೊ ರಿಲೀಸ್ ಮಾಡಿದ್ದಾರೆ. ತಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದರೂ, ಬಲವಂತವಾಗಿ ಅಪಹರಿಸಲಾಗಿದೆ. ಹಾಗಾಗಿ ನೀವು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು. ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ಕೊಡಿಸಬೇಕು ಎಂದು ಸ್ಪೀಕರ್ಗೆ ಸಚಿವ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ
ಗುರುವಾರ ಅಧಿವೇಶನದಲ್ಲಿ ಬಹುಮತ ಸಾಬೀತಿನ ಮೇಲೆ ಬೆಳಗಿನಿಂದ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಆದರೆ, ಸರ್ಕಾರ ಬಹಮತ ಸಾಬೀತಿಗೆ ವಿಳಂಬನೀತಿ ಅನುಸರಿಸುತ್ತಿದೆ ಎಂದು ವಿರೋಧ ಪಕ್ಷಗಳ ಟೀಕೆಯ ನಡುವೆ, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಂದೇಶ ಕಳಿಸಿರುವ ರಾಜ್ಯಪಾಲ ವಜುಭಾಯ್ ವಾಲಾ ಆಡಳಿತ ಪಕ್ಷ ಇಂದೇ ಬಹುಮತ ಸಾಬೀತುಪಡಿಸಲಿ ಎಂದು ಸೂಚಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.