ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದ ಚುನಾವಣಾ ಕಣ ತೀವ್ರ ರಂಗು ಪಡೆದುಕೊಳ್ಳುತ್ತಿದೆ. ಇದರ ನಡುವೆ ಪೊಲೀಸರು ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್ಪೋಸ್ಟ್ಗಳನ್ನು ನಿರ್ಮಿಸಿ ತಪಾಸಣೆ ನಡೆಸುತ್ತಿದ್ದಾರೆ. ಇಂದು ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ದಾಖಲೆ ಇಲ್ಲದ ಸುಮಾರು 42 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಫ್ಯಾನ್ಗಳು, ಅನ್ನಭಾಗ್ಯ ಅಕ್ಕಿ, ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
ಮಂಡ್ಯದ ನಾಗಮಂಗಲ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ. ನಾಗಮಂಗಲ ತಾಲೂಕು ಚಿಣ್ಯ ಗ್ರಾಮದ ಚೆಕ್ ಪೋಸ್ಟ್ ನಲ್ಲಿ ಘಟನೆ ನಡೆದಿದ್ದು, ಹೊಸದುರ್ಗದಿಂದ ಮಂಡ್ಯ ತಾಲೂಕಿನ ಶಿವಳ್ಳಿಗೆ ಬರುತ್ತಿದ್ದ ಕ್ಯಾಂಟರ್ನಲ್ಲಿ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ. 50 ಕೆ.ಜಿ ತೂಕದ 250 ಚೀಲಗಳು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಇಂದು ಒಂದೇ ದಿನ ದಾಖಲೆ ಇಲ್ಲದ 10 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ 200 ಲೀಟರ್ ಮದ್ಯ, 65 ಕೆ.ಜಿ ಡ್ರಗ್ಸ್, ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 27 ಕಡೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. 25 ಮಂದಿ ಕ್ರಿಮಿನಲ್ ಗಳನ್ನು ಗಡಿಪಾರು ಮಾಡಲಾಗಿದೆ. ಉಳಿದಂತೆ ಇಬ್ಬರು ಕ್ರಿಮಿನಲ್ ಗಳ ಮೇಲೆ ಗೂಂಡಾ ಆಕ್ಟ್ ದಾಖಲು ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ದಾಖಲೆ ರಹಿತ 8.90 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಾ ದಿಂದ ಉಡುಪಿಗೆ ಹಣ ತೆಗೆದುಕೊಂಡು ಹೋಗುತ್ತಿದ್ದರು. ಉಡುಪಿಯ ಉದ್ಯಮಿ ಅನುಪ್ ಎಂಬುವವರಿಗೆ ಸೇರಿದ ಹಣ ಎನ್ನಲಾಗಿದ್ದು, ಗೋವಾ- ಕಾರವಾರ ಗಡಿಯ ಮಾಜಾಳಿಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಚಿತ್ತಾಕುಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾವನ ಬಸ್ ನಿಲ್ದಾಣದ ಬಳಿ ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿಗೆ ಸೇರಿದ ಗಿಫ್ಟ್ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಆರ್.ಮಂಜುನಾಥ್‌ಗೆ ಸೇರಿದ ಸುಮಾರು 2 ಲಕ್ಷ ಬೆಲೆ ಬಾಳುವ 800 ಬಾಕ್ಸ್ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುಕ್ಕರ್, ತವ ಸೇರಿದಂತೆ ಐದು ಸಾಮಾಗ್ರಿಗಳ ಕುಕ್ ಸೆಟ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.