ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದ ಚುನಾವಣಾ ಕಣ ತೀವ್ರ ರಂಗು ಪಡೆದುಕೊಳ್ಳುತ್ತಿದೆ. ಇದರ ನಡುವೆ ಪೊಲೀಸರು ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್ಪೋಸ್ಟ್ಗಳನ್ನು ನಿರ್ಮಿಸಿ ತಪಾಸಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ದಾಖಲೆಯಿಲ್ಲದ 30 ಲಕ್ಷ ರೂಪಾಯಿ ಹಣವನ್ನು ಲಾಲ್ ಬಾಗ್ ದಕ್ಷಿಣ ಗೇಟ್ ಬಳಿ ಪೊಲೀಸರು ಸೀಜ್ ಮಾಡಿದ್ದಾರೆ. ಜೊತೆಗೆ ಹಣ ತೆಗೆದುಕೊಂಡು ಹೋಗುತ್ತಿದ್ದ ಕುಂದನ್ ಗುಜರ್, ರತನ್ ಗುಪ್ತಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ದಾಖಲೆ ಇಲ್ಲದ 17 ಕೆ.ಜಿ. ಚಿನ್ನ ಹಾಗೂ ಬೆಳ್ಳಿ ಸೀಜ್ ಮಾಡಿದ್ದಾರೆ. ಜಪ್ತಿ ಮಾಡಿರುವ ಚಿನ್ನದ ಮೌಲ್ಯ 6 ಕೋಟಿ 44 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಕಂಡು ಬಂದಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿ ಘಟನೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 14 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಅಲ್ಲದೆ ಮೂವರು ಪೊಲೀಸರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಭಟ್ಕಳ ಮೂಲದ ಯಶ್ವಂತ್ ಗೊಂಡ, ಹೊನ್ನಾವರದ ಗುಣವಂತೆಯ ಶ್ರೀನಿವಾಸ್ ಗೌಡ, ರಘು ನಾಯ್ಕ ಎಂಬವರು ಇಕೋ ಕಾರಿನಲ್ಲಿ ಮುರ್ಡೇಶ್ವರಕ್ಕೆ ಹಣ ಕೊಂಡೊಯ್ಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಿ.ಡಿ.ಕೋಟೆ ಗ್ರಾಮದ ಚೆಕ್ ಪೋಸ್ಟ್‌ನಲ್ಲಿ ಬಳಿ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸ್ತಿದ್ದ 3ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಯಾದಗಿರಿಯಲ್ಲಿ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಹಣ ಜಪ್ತಿ ಮಾಡಲಾಗಿದೆ. 3 ಲಕ್ಷ 30 ಸಾವಿರ ರೂಪಾಯಿ ಹಣ ಸೀಜ್ ಮಾಡಲಾಗಿದೆ. ಹಣ ಸಾಗಾಟಕ್ಕೆ ಬಳಸಿದ ಕ್ರೂಷರನ್ನ ಗುರುಮಠಕಲ್ ಪೊಲೀಸರು ಜಪ್ತಿ ಮಾಡಿದ್ದಾರೆ.
ವಿಜಯಪುರದಲ್ಲಿ ಬಾಲಾಜಿ ಶುಗರ್ಸ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.. ಕಾಂಗ್ರೆಸ್ ನಾಯಕ ಎಸ್.ಆರ್ಪಾಟೀಲ್ರಿಗೆ ಸೇರಿದ 40 ಲಕ್ಷ ರೂಪಾಯಿ ಮೌಲ್ಯದ ಗಿಫ್ಟ್ ಐಟಂ ಪತ್ತೆ ಆಗಿದೆ. ಮಾ.27 ರಂದು 2 ಕೋಟಿ 10 ಲಕ್ಷ ಮೌಲ್ಯದ ಗಿಫ್ಟ್‌ಗಳು ಪತ್ತೆಯಾಗಿದ್ದವು. ಇನ್ನು, ಹುಬ್ಬಳ್ಳಿಯ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಕ್ಷಾಂತರ ಮೌಲ್ಯದ ಅಫೀಮು ಮತ್ತು ಸ್ಪಿರಿಟ್ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಕೊಪ್ಪಳದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ 1.92 ಲಕ್ಷ ರೂಪಾಯಿ ಮೌಲ್ಯದ 120 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.