ಬೆಂಗಳೂರು: ರಾಜ್ಯ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಟಿಕೆಟ್ ಆಕಾಂಕ್ಷಿಗಳು, ಅಭ್ಯರ್ಥಿಗಳು ಮತದಾರರಿಗೆ ವಿವಿಧ ರೀತಿಯಲ್ಲಿಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಎಲೆಕ್ಷನ್ ದಿನಾಂಕ ಘೋಷಣೆ ಮಾಡುವ ಮುನ್ನವೇ ಮತದಾರರಿಗೆ ವಿವಿಧ ರೀತಿಯಲ್ಲಿ ಗಿಫ್ಟ್ಗಳನ್ನು ನೀಡಲು ಅಭ್ಯರ್ಥಿಗಳು ಮುಂದಾಗುತ್ತಿದ್ದು, ಈ ಹಿನ್ನೆಯಲ್ಲಿ ಈಗಾಗಲೇ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿರುವ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಈ ನಡುವೆ ತಪಾಸಣೆ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ದಾಖಲಾತಿಗಳಿಲ್ಲ ಸುಮಾರು 67 ಲಕ್ಷ ರೂಪಾಯಿ ಹಣ, 16 ಕೆಜಿ ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಚೆಕ್ ಪೋಸ್ಟ್ ದಾಖಲೆ ಇಲ್ಲದೆ ಸಾಗಾರ ಮಾಡುತ್ತಿದ್ದ 3.97 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಕಾರಿನಲ್ಲಿ ಹಣದ ಜೊತೆಗೆ 61,300 ರೂಪಾಯಿ ಮೌಲ್ಯದ ಚೂಡಿದಾರ, ಫ್ರಾಕ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಚಂದನ ಸಿಂಗ್ ಎಂಬುವವರಿಗೆ ಸೇರಿದ ಕಾರಿನಲ್ಲಿ ವಸ್ತುಗಳು ಪತ್ತೆಯಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಚಿಗರಳ್ಳಿ ಚೆಕ್ ಪೋಸ್ಟ್ ನಲ್ಲಿ ಸೂಕ್ತ ದಾಖಲಾತಿ ಇಲ್ಲದೆ ಸಾಗಾಟ ಮಾಡುತ್ತಿದ್ದ 4 ಲಕ್ಷ ರೂಪಾಯಿ ನಗದು, 16 ಕಿಲೋ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಯಾದಗಿರಿ ಮೂಲದ ಅರುಣಕುಮಾರ್ ಎಂಬವರ ಕಾರಿನಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ನಗದು ಮತ್ತು ಬೆಳ್ಳಿ ಸಿಕ್ಕಿದೆ. ದಾಖಲಾತಿ ಮತ್ತು ಬಿಲ್ ಇಲ್ಲದೆ ತೆಗೆದುಕೊಂಡು ಹೋಗುತ್ತಿದ್ದ ಕಾರಣ ಹಣ ಹಾಗೂ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಧಾರವಾಡ ತಾಲೂಕಿನ ತೇಗೂರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇನ್ನೋವಾ ಕಾರಿನಲ್ಲಿ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುತಿದ್ದ 53 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಹಾವೇರಿ ಜಿಲ್ಲೆಯ ತಡಸಕ್ಕೆ ಸಂಜು ಹಿರೇಮಠ ಎಂಬಾತ ಹಣ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಗರಗ ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ವಿಶೇಷ ಚೆಕ್ ಪೋಸ್ಟ್ನಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಪೊಲೀಸರು ಸೀಜ್ ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 29.70 ಲಕ್ಷ ರೂಪಾಯಿ ಮೌಲ್ಯದ 1,100 ನಾನ್ ಸ್ಟಿಕ್ ದೋಸೆ ತವಾಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ವಿನೋಭ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 8 ಲಕ್ಷ ರೂಪಾಯಿ ಮೌಲ್ಯದ 30 ಟನ್ ತೂಕದ ಬೇಳೆ, ರವೆ, ಗೋಧಿ ಮತ್ತು ಇತರೆ ಆಹಾರ ಸಾಮಗ್ರಿಗಳಿದ್ದ 1,000 ಬ್ಯಾಗ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 7 ಲಕ್ಷ ರೂಪಾಯಿ ಮೌಲ್ಯದ 10 ಟನ್ ತೂಕದ 404 ಅಕ್ಕಿ ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಿಡಲಾಗಿದ್ದ 10 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ, ಸೀರೆ, ಕುಕ್ಕರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿ 8 ಪ್ರತ್ಯೇಕ ಪ್ರಕರಣ ದಾಖಲಿಸಿ ಸುಮಾರು 25 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ.