ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಚುನಾವಣೆಗೆ ಎಲ್ಲಾ ಪಕ್ಷಗಳಿಂದ ಮತ್ತು ಪಕ್ಷೇತರರಾಗಿ 2586 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ಗಳನ್ನು ದೆಹಲಿಯ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯು ಪರಿಶೀಲನೆಗೆ ಒಳಪಡಿಸಿದ್ದು, ಕೋಟ್ಯಾಧಿಪತಿಗಳ ವಿವರವನ್ನು ಬಿಡುಗಡೆ ಮಾಡಿದೆ.
ಎಡಿಆರ್ ವರದಿ ಪ್ರಕಾರ ಅಫಿಡಫಿಟ್ ಸಲ್ಲಿಸಿರುವ 2615 ಅಭ್ಯರ್ಥಿಗಳಲ್ಲಿ 592 ಮಂದಿ 5 ಕೋಟಿ ಅಥವಾ ಅದಕ್ಕೂ ಹೆಚ್ಚು ಸಂಪತ್ತು ಹೊಂದಿದ್ದಾರೆ. 272 ಅಭ್ಯರ್ಥಿಗಳು 2 ಕೋಟಿಯಿಂದ 5 ಕೋಟಿಯವರೆಗೆ ಸಂಪತ್ತು ಹೊಂದಿದ್ದಾರೆ. 50 ಲಕ್ಷದಿಂದ 2 ಕೋಟಿ ಮೌಲ್ಯದ ಸಂಪತ್ತು ಹೊಂದಿರುವವರ ಸಂಖ್ಯೆ 493 , 10 ಲಕ್ಷದಿಂದ 50 ಲಕ್ಷ ಮೌಲ್ಯದ ಸಂಪತ್ತು ಹೊಂದಿರುವವರ ಸಂಖ್ಯೆ 578 ಹಾಗೂ 10 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಸಂಪತ್ತು ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ 651 ಇದೆ.
ಒಟ್ಟಾರೆ ಅತ್ಯಧಿಕ ಶ್ರೀಮಂತ ಅಭ್ಯರ್ಥಿಗಳ ಪೈಕಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಕೆಜಿಎಫ್ ಬಾಬು ಎಂದೇ ಕರೆಯಲ್ಪಡುವ ಯುಸೂಫ್ ಶರೀಫ್ ಅಗ್ರಸ್ಥಾನದಲ್ಲಿದ್ದು, ಅವರು ತಮ್ಮ ಆಸ್ತಿಯನ್ನು 1621ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್ ನಾಗರಾಜು (ಎಂಟಿಬಿ ನಾಗರಾಜು) 1614 ಕೋಟಿ ರೂಪಾಯಿ ಹಾಗೂ ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 1414 ಕೋಟಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ.