ಅಗ್ರಹಾರ ಗ್ರಾಮದ ರಾಜಾಸಾಬ್, ಅಜಿಸಾಬ್, ಹನುಮಂತ ರಾಯ, ಹುಸೇನಸಾಬ್ ಎಂಬ ರೈತರಿಗೆ ಸೇರಿದ ಭತ್ತ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಭತ್ತ ಕಟಾವು ಮಾಡಿ ಒಂದೇ ಕಡೆ ರಾಶಿ ಹಾಕಿದ್ದ ರೈತರಿಗೆ ಕೈಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಭಾರೀ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಅಪಾರ ನಷ್ಟ ಎದುರಾಗಿದ್ದು, ಭತ್ತ ನಾಶವಾದರೂ ಇದುವರೆಗೂ ಅಧಿಕಾರಿಗಳು ಯಾರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ನಾಳೆಯೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಚಾಮರಾಜನಗರ, ಮಂಡ್ಯ, ಹಾಸನ, ರಾಮನಗರ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕರಾವಳಿ ಜಿಲ್ಲೆಗಳಲ್ಲಿ ಒಂದೆರಡು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.