ವಿಶೇಷ ಎಂದರೇ ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕರಿಗೆ ಸ್ವಾಗತ ಕೋರಿ ಹಾಕುತ್ತಿರುವ ಕ್ರೈನ್ ಹಾರಗಳು ಎಲ್ಲರ ಗಮನ ಸೆಳೆದಿದೆ. ಅಲ್ಲದೇ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಯಾತ್ರೆಯಲ್ಲಿ ಇದುವರೆಗೂ 500ಕ್ಕೂ ಹೆಚ್ಚು ವಿವಿಧ ರೀತಿಯ ಹಾರಗಳನ್ನು ಹಾಕಲಾಗಿದೆ. ಆ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಮಾಜಿ ಸಿಎಂ ಪಾತ್ರರಾಗಿದ್ದಾರೆ.
ಈ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಹಿತಿಯನ್ನು ಹಂಚಿಕೊಂಡಿದ್ದು, ಸಮಸ್ತ ಕನ್ನಡಿಗರ ಕೃಪೆ, ಆಶೀರ್ವಾದದಿಂದ ಪಂಚರತ್ನ ರಥಯಾತ್ರೆ ನೂತನ ಮೈಲುಗಲ್ಲು ಸ್ಥಾಪಿಸಿದೆ. ಕಳೆದ ನ.18ಕ್ಕೆ ಆರಂಭವಾದ ಈ ಯಾತ್ರೆಯಲ್ಲಿ ನಾಡಿನ ರೈತಾಪಿ ಜನ, ಅಭಿಮಾನಿಗಳು ಅಕ್ಕರೆಯಿಂದ ತಾವು ಬೆಳೆದ ಕೃಷಿಬೆಳೆಗಳಿಂದ ತಯಾರಿಸಿ ಹಾಕಿದ ನೂರಾರು ಹಾರಗಳು ಹೊಸ ದಾಖಲೆಯನ್ನೇ ನಿರ್ಮಿಸಿವೆ.
ಜನರ ಈ ಪ್ರೀತಿ, ವಿಶ್ವಾಸಕ್ಕೆ ಪ್ರತಿಯಾಗಿ ನಾನು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಪಾತ್ರನಾಗಿದ್ದೇನೆ. ಇಂಥ ಎರಡು ದಾಖಲೆಗಳಿಗೆ ನಾನು ಪಾತ್ರನಾಗಲು ಜನತೆ ತೋರುತ್ತಿರುವ ಆದರಾಭಿಮಾನವೇ ಕಾರಣ. ಈ ದಾಖಲೆ ಮತ್ತು ಗೌರವವನ್ನು ನಾಡಿನ ರೈತರು, ಜನತಾ ದಳದ ಪಕ್ಷದ ಕಾರ್ಯಕರ್ತರು ಹಾಗೂ ಸಮಸ್ತ ಕನ್ನಡಿಗರಿಗೆ ಅತ್ಯಂತ ವಿನಮ್ರತೆಯಿಂದ ಸಮರ್ಪಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಯಾತ್ರೆಯಲ್ಲಿ ಇದುವರೆಗೂ ರೈತರು ತಾವು ಬೆಳೆದಿರುವ ವಿವಿಧ ತರಕಾರಿಗಳು, ಹಣ್ಣುಗಳು, ಹೂ ಸೇರಿದಂತೆ ವಿವಿಧ ವಸ್ತುಗಳಿಂದ ಹಾರಗಳನ್ನು ಸಿದ್ದಪಡಿಸಿದ್ದಾರೆ. ರಾಗಿ, ಟೊಮೆಟೋ, ಡ್ರ್ಯಾಗನ್ ಫ್ರೂಟ್, ದ್ರಾಕ್ಷಿ, ಸಿಹಿಕುಂಬಳ, ದ್ರಾಕ್ಷಿ, ನುಗ್ಗೆ ಸೊಪ್ಪು, ನವಿಲು ಕೋಸು, ಬಜ್ಜಿ ಮೆಣಸಿಕಾಯಿ, ಅನಾನಸ್, ಮೆಕ್ಕೆಗೋಳ, ತೆಂಗಿನ ಕಾಯಿ, ಸ್ಕೂಲ್ ಬ್ಯಾಗ್, ಅಡಕೆ, ಚೆರ್ರಿ ಹಣ್ಣು, ಕಬ್ಬು, ಆ್ಯಪಲ್, ಉದ್ದಿನವಡೆ, ಬೆಲ್ಲ ಸೇರಿದಂತೆ ವಿವಿಧ ರೀತಿಯ ಹಾರಗಳನ್ನು ಹಾಕಿದ್ದಾರೆ.