ಹೋಳಿಹುಣ್ಣಿಮೆಯನ್ನು ಉತ್ತರ ಕನ್ನಡದ ಅಂಕೋಲೆಯಲ್ಲಿ ಸುಗ್ಗಿಹಬ್ಬವೆಂದು ಕರೆಯುತ್ತಾರೆ. ಹಾಲಕ್ಕಿ, ಕೋಮಾರಪಂಥ, ಹಳ್ಳೇರ ಮುಂತಾದ ಸಮಾಜ ಬಾಂಧವರು ಸ್ವತಃ ತಾವೇ ತಿಂಗ್ಳಾನುಗಟ್ಟಲೆ ಬಣ್ಣದ ಕಾಗದ ಕುಂಚ ಬೇಗಡೆ ಮುಂತಾದವುಗಳಿಂದ ತಯಾರಿಸಿದ ಬಣ್ಣ ಬಣ್ಣದ ಸುಗ್ಗಿ ತುರಾಯಿಗಳನ್ನು ತಲೆಯ ಮೇಲೆ ಹೊತ್ತು ಗುಮಟೆ ವಾದ್ಯದೊಂದಿಗೆ ಹೋ ಹೋ ಚೋ... ಎಂದು ಚಂದಗೆ ಅವರದ್ದೇ ಆದ ಜನಪದ ಸಾಂಪ್ರದಾಯಿಕ ಹೆಜ್ಜೆಗುಣಿತದೊಂದಿಗೆ ಲಯಬದ್ಧವಾಗಿ ಕುಣಿಯುತ್ತ ಊರಿಂದೂರಿಗೆ ಸಂಚರಿಸುತ್ತಾರೆ.
"ತಯಾರಿಯ ಖರ್ಚೂ ಕೆಲವೊಮ್ಮೆ ಹುಟ್ಟುವುದಿಲ್ಲ" ಎಂಬ ಉದ್ಘಾರವನ್ನು ಜೊತೆಗಿಟ್ಟುಕೊಂಡೇ ಮತ್ತೆ ಮುಂದಿನವರ್ಷ ಸಂಪ್ರದಾಯ ಬಿಡಬಾರದು ಎನ್ನುತ್ತ ಹೊಸ ಉಮ್ಮೇದಿಯಿಂದ ಕುಂಚ ಕಟ್ಟಲು ತಯಾರಾಗುವ ಸುಗ್ಗಿ ತಂಡದ ಜೊತೆ ಶ್ರಮಿಕವರ್ಗದ ಹರಿಕಂತ್ರ, ಅಂಬೇರ,ನಾಮಧಾರಿ,ಆಗೇರ ಮುಂತಾದ ಸಮಾಜಬಾಂಧವರು ಕಟ್ಟುವ ಅಥವಾ ಹಾಕುವ ನಾನಾ ವೇಷಗಳೂ ಇರುತ್ತವೆ.ಇದರಲ್ಲಿ ನಾ ಮೇಲು ನೀ ಮೇಲು ಅನ್ನುತ್ತ ಹಾಕುವ ಹಲಬಗೆಯ ಕರಡಿವೇಷಗಳು ಪ್ರಮಖವಾದವು.
ಇಂದು ಮತ್ತು ನಾಳೆ ಮನೆಮನೆಗೆ ಬರುವ ಚಿಕ್ಕಪುಟ್ಟ ವೇಷದವರನ್ನು ಬರಮಾಡಿಕೊಂಡು ಹತ್ತೋ ಇಪ್ಪತ್ತೋ ಕೊಟ್ಟು ಖುಷಿ ಮಾಡುವ ಸಂಭ್ರಮ ನಮಗೆ..ವಾರ ಮೊದಲೇ ಬ್ಯಾಂಕಿಗೆ ಹೋಗಿ ಹತ್ತರ, ಇಪ್ಪತ್ತು ಐವತ್ತರ ಚಿಲ್ಲರೆ ನೋಟಿನ ಕಟ್ಟು ತಂದು ಒಳಗಿಟ್ಟುಕೊಂಡು..ಈ ಸಲ ನಮ್ಮನೆಗೆ ಇಪ್ಪತ್ತೆರಡು ಕರ್ಡಿ..ಇಪ್ಪತ್ತೆಂಟು ಕರ್ಡಿ ಅಂತ ಲೆಕ್ಕ ಹಾಕ್ತ ಖುಷಿಪಡುವ ಸುಗ್ಗಿ ನಮಗೂ.. ಅಕ್ಕೋರನ್ನು ನೆನಪಿಸಿಕೊಂಡು ನಾಕೈದು ಕಿ ಮೀ ದೂರದಿಂದ ನಡೆದು ಬರುವ ವೇಷ ಹಾಕಿದ ಹುಡುಗರೂ ಇದ್ದಾರೆ.
ಹೋಳಿ ಹುಣ್ಣಿಮೆ ದಿನ ವೇಷದವರೆಲ್ಲ ಬಂದು ಹೋದ ಮೇಲೆ ರಾತ್ರಿ ಒಂದು ಗಂಟೆಯ ನಂತರ ಕುಸುಮಾಲೆ ಹೂವಿನ ಕೋಲು ಹಿಡಿದು ಕರಿಮಕ್ಕಳು ಹುಯಿಲು ಹಾಕುತ್ತ ಬರುತ್ತಾರೆ.ಅವರಿಗೆ ಕೊಂಚ ಹಣ ಮತ್ತು ಕಾಮಣ್ಣನ ಸುಡಲು ಮನೆಗೊಂದು ಕಟ್ಟಿಗೆ ಕೊಡುವ ವಾಡಿಕೆ..ಊರಿನಲ್ಲಿ ಕೆಟ್ಟ ದುಷ್ಟ ಶಕ್ತಿಗಳು..ಭೂತ ಪ್ರೇತಾದಿಗಳನ್ನು ಇವರ ಕಿರುಚುವ ಧ್ವನಿಯ ಹುಯಿಲು ದೂರಮಾಡುತ್ತದೆ ಎಂದು ನಂಬುತ್ತಾರೆ..ಕೊಟ್ಟ ಕಟ್ಟಿಗೆ ಒಟ್ಟು ಮಾಡಿ ಊರ ಗದ್ದೆಯಲ್ಲಿ ಕಾಮನ ಸುಡುತ್ತಾರೆ.. ಮರುದಿನ ತೆಂಗು ಬೆಲ್ಲ ಎಳ್ಳಿನ ಪಂಚಕಜ್ಜಾಯ ಮಾಡಿ ಊರಿನ ಎಲ್ಲ ಮನೆಗೆ ಈ ಮಕ್ಕಳು ಕೊಡುತ್ತಾರೆ.