ನಿನ್ನೆ ರಾತ್ರಿಯಿಂದ ಬೆಂಗಳೂರಿನಲ್ಲಿ ಸುರಿದ ಮಳೆಗೆ ಚರಂಡಿಗಳೆಲ್ಲ ಉಕ್ಕಿ ಹರಿದ ಪರಿಣಾಮ ರಸ್ತೆಯಲ್ಲಿ ನೀರು ನಿಂತಿತ್ತು. ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಕಳೆದ ಒಂದೆರಡು ತಿಂಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಬೆಂಗಳೂರಿನಲ್ಲಿ ಆರ್ಭಟಿಸಿದ ಪರಿಣಾಮ ಜನರು ಪರದಾಡುವಂತಾಯಿತು. ಹುಳಿಮಾವಿನ ಮಾರುತಿ ದೇವಸ್ಥಾನದ ಬಳಿ ಇರುವ ಅಪಾರ್ಟ್ಮೆಂಟ್ಗೆ ನೀರು ನುಗ್ಗಿದ ಕಾರಣ ನೆಲಮಹಡಿಯಲ್ಲಿದ್ದ ವಾಹನಗಳು ಮುಳುಗಡೆಯಾಗಿವೆ. ನಾಗರಬಾವಿ ಸರ್ಕಲ್ ಬಳಿ ಉಂಟಾದ ಭೂಕುಸಿತದಿಂದ ಮರಗಳು ಉರುಳಿದ್ದು, ರಸ್ತೆಯಲ್ಲಿ ಮಣ್ಣು ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.