ಭಾರತದಲ್ಲಿ ವೈಭವದಿಂದ ಆಚರಿಸುವ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬ ಕೂಡ ಒಂದು. ಈ ಹಬ್ಬವನ್ನು ವಿನಾಯಕ ಚತುರ್ಥಿ, ಗಣೇಶ ಚತುರ್ಥಿ ಮತ್ತು ಚೌತಿ ಹಬ್ಬವೆಂದು ಸಹ ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿ ಮೂರ್ತಿಗಳು ಹೆಚ್ಚು ಸಿಗುತ್ತಿದ್ದು, ಇದರಲ್ಲಿ ವಿಷಕಾರಿ ರಾಸಾಯನಿಕ ಮತ್ತು ಲೋಹ ಲೇಪಿತ ಬಣ್ಣಗಳನ್ನು ಬಳಸಲಾಗುತ್ತದೆ.
ಮಣ್ಣಿನ ಗಣಪ: ಪರಿಸರ ಸ್ನೇಹಿ ಗಣಪನ ವಿಗ್ರಹದಲ್ಲಿ ಮೊದಲ ಸ್ಥಾನ ಮಣ್ಣಿನಿಂದ ತಯಾರಿಸುವ ಗಣೇಶನ ಮೂರ್ತಿಗಳು ಪಡೆದಿದೆ. ಪಿಒಪಿ ವಿಗ್ರಹಗಳ ಮೇಲೆ ನಿಷೇಧವಿರುವುದರಿಂದ ಹೆಚ್ಚಿನ ಮಾರುಕಟ್ಟೆಯಲ್ಲಿ ಮಣ್ಣಿನ ಗಣಪತಿಗಳು ಸಿಗುತ್ತದೆ. ಮೂರ್ತಿಗಳನ್ನು ತಯಾರಿಸಲು ಗೊತ್ತಿದ್ದರೆ ಜೇಡಿ ಮಣ್ಣಿನಿಂದ ಕೂಡ ಈ ವಿಗ್ರಹಗಳನ್ನು ತಯಾರಿಸಬಹುದು. ಹಾಗೆಯೇ ಇದನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಅರಿಶಿನ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಬಹುದು.