ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿದ್ದರೂ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿ ಅನ್ ಲಾಕ್ 1 ಮತ್ತು 2 ಅನ್ನು ಜಾರಿ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಲೇ ಇದೆ. ಪರಿಣಾಮವಾಗಿ ದೇಶದಲ್ಲಿ ಮಾರಣಾಂತಿಕ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಇದೀಗ 13 ಲಕ್ಷದ ಗಡಿ ದಾಟಿದೆ. ಭಾರತದಲ್ಲಿ ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2ರಂದು 20 ಸಾವಿರ, ಜುಲೈ 3ರಂದು 22 ಸಾವಿರ ಹಾಗೂ ಜುಲೈ 4ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ, ದಿನ ಕಳೆದಂತೆ ಈ ಸಂಖ್ಯೆ ದ್ವಿಗುಣವಾಗುತ್ತಲೇ ಸಾಗುತ್ತಿದೆ. ಪರಿಣಾಮ ಶುಕ್ರವಾರದ ವೇಳೆಗೆ 48,916 ಹೊಸ ಪ್ರಕರಣಗಳು ವರದಿಯಾಗಿದೆ. ಇದರಿಂದ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 13,36,861ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಕೊರೋನಾ ಸೋಂಕು ವ್ಯಾಪಿಸುವ ಮುನ್ನ ಬೇರೆ ದೇಶಗಳಲ್ಲಿ ದೊಡ್ಡ ಮಟ್ಟದಲ್ಲೇ ಅಟ್ಟಹಾಸ ನಡೆಸಿತ್ತು. ಹೀಗಾಗಿ, ಭಾರತಕ್ಕೆ ಕೋವಿಡ್ ಅಪಾಯದ ಬಗ್ಗೆ ಮೊದಲೇ ಗ್ರಹಿಕೆಯಂತೂ ಇತ್ತು. ಆದರೂ ಕೂಡ ಇಲ್ಲಿ ಈಗ ಅನೇಕ ಕಡೆ ಸಾಮುದಾಯಿಕವಾಗಿ ಹಬ್ಬಿ ಪರಿಸ್ಥಿತಿ ಕೈಮೀರಿದೆ. ಈ ಸ್ಥಿತಿ ತಲುಪಲು ಕಾರಣ ಏನು? ಏಮ್ಸ್ ವಿಜ್ಞಾನಿಗಳು ನಡೆಸಿರುವ ಅಧ್ಯಯನದ ಪ್ರಕಾರ ಭಾರತಕ್ಕೆ ಕೋವಿಡ್ ಕಾಲಿಟ್ಟ ಆರಂಭಿಕ ಹಂತದಲ್ಲಿ ಅನೇಕ ರೋಗಿಗಳನ್ನ ಗುರುತಿಸಲು ಸಾಧ್ಯವಾಗದೇ ಹೋದದ್ದು ಇಷ್ಟು ವ್ಯಾಪಕವಾಗಿ ಕೊರೋನಾ ಹಬ್ಬಲು ಕಾರಣವಾಗಿದೆಯಂತೆ. ಜಾಗತಿಕ ಟ್ರೆಂಡ್ ಆಧರಿಸಿ ಇಲ್ಲಿ ಕಾರ್ಯತಂತ್ರ ರೂಪಿಸಿದ್ದು ಯಡವಟ್ಟಾಗಿರುವುದು ವೇದ್ಯವಾಗಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ತಮಗೆ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಚೌಹಾಣ್ ಅವರು, ಯಾರೆಲ್ಲ ತಮ್ಮೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೋ ಅವರೆಲ್ಲರೂ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮತ್ತು ಕ್ವಾರಂಟೈನ್ ಆಗುವಂತೆ ಮನವಿ ಮಾಡಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಚೌಹಾಣ್ ಅವರು ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶ್ವದ ಮೊದಲ ವಿಮಾನ ಹಾರಾಟಗಾರ ಎಂದು ರಾಜ ರಾವಣ ಬಗ್ಗೆ ಶ್ರೀಲಂಕಾ ಸರ್ಕಾರ ಮತ್ತು ಅಲ್ಲಿ ವಿಮಾನಯಾನ ಪ್ರಾಧಿಕಾರ ಸಂಶೋಧನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾವಣನ ದಂಡಯಾತ್ರೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಅಥವಾ ಪುಸ್ತಕಗಳು ಇದ್ದರೆ ಅದನ್ನು ನೇರವಾಗಿ ಸರ್ಕಾರಕ್ಕೆ ನೀಡಿ ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎಸ್ಎಲ್) ಕಳೆದ ವಾರ ಸಾರ್ವಜನಿಕ ಕರೆ ನೀಡಿತು. ಈ ದಾಖಲೆಗಳನ್ನು ನೀಡಲು ಜುಲೈ.31ರ ವರೆಗೆ ಗಡುವು ನೀಡಲಾಗಿತ್ತು. ಆದರೆ ಇನ್ನೂ ಒಂದು ವಾರಗಳ ಕಾಲ ಬಾಕಿ ಇರುವಾಗಲೇ ರಾವಣನ ಕುರಿತು 100ಕ್ಕೂ ಹೆಚ್ಚು ದಾಖಲೆಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎನ್ನಲಾಗುತ್ತಿದೆ.
ಲಾಕ್‌ಡೌನ್ ಮುಗಿದು ಅನ್ಲಾಕ್ ಶುರುವಾದರೂ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ. ಆದರೆ ಚಿತ್ರಮಂದಿರಗಳ ಮಾಲೀಕರಿಗೆ ಹಾಗೂ ಥಿಯೇಟರಿಗೇ ಹೋಗಿ ಸಿನಿಮಾ ನೋಡಬೇಕೆಂಬ ಚಿತ್ರರಸಿಕರಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮುಂದಿನ ತಿಂಗಳಿನಿಂದ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಡಬಹುದೆಂದು ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿದೆ.
ಕಾಫಿ ಡೇ ಎಂಬ ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಿದ್ಧಾರ್ಥ್ ಹೆಗ್ಡೆ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ತೆರಿಗೆ ಅಧಿಕಾರಿಗಳ ಒತ್ತಡವನ್ನು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಸೂಸೈಡ್ ನೋಟ್ನಲ್ಲಿ ವಿ.ಜಿ. ಸಿದ್ದಾರ್ಥ ಬರೆದಿದ್ದರು. ಅದರಂತೆ ನೂತನವಾಗಿ ರಚಿತವಾದ ಕಾಫಿ ಬೋರ್ಡ್ ಮಂಡಳಿಯು ಇದೇ ಸೂಸೈಡ್ ನೋಟ್ ವಿಚಾರಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು. ಸಿಬಿಐ ಡಿಐಜಿ ಅಶೋಕ್ ಕುಮಾರ್ ಮಲ್ಹೋತ್ರಾ ನೇತೃತ್ವದ ತಂಡದಿಂದ ತನಿಖೆ ಮುಗಿದಿದ್ದು ಸದ್ಯದಲ್ಲೇ ವರದಿ ಸಲ್ಲಿಸಲು ಸಿದ್ಧವಾಗಿದೆ. ತನಿಖಾ ವರದಿಯಲ್ಲಿರುವ ಕೆಲ ಅಂಶಗಳು ಮಾಧ್ಯಮಗಳಿಗೆ ಸಿಕ್ಕಿವೆ. ಆ ಮಾಹಿತಿ ಪ್ರಕಾರ, ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆಗೆ ತೆರಿಗೆ ಅಧಿಕಾರಿಗಳ ಕಿರುಕುಳ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಮತ್ತೊಂದು ಪ್ರಮುಖ ವಿಚಾರವೆಂದರೆ ಸಿದ್ಧಾರ್ಥ್ ನಿರ್ವಹಿಸುತ್ತಿದ್ದ ಸಂಸ್ಥೆಗಳಲ್ಲಿ ಸುಮಾರು 3500-4000 ಕೋಟಿ ರೂಪಾಯಿಯಷ್ಟು ಲೆಕ್ಕವೇ ಸಿಕ್ಕಿಲ್ಲ. ತಪ್ಪಿಹೋದ ಇಷ್ಟು ಹಣ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೋವಿಡ್ ಸೋಂಕಿತ ಮೃತಪಟ್ಟರೆ ವಿದ್ಯುತ್ ಚಿತಾಗಾರದಲ್ಲಿ ಮೃತದೇಹದ ದಹನಕ್ಕೆ ಹಣ ನೀಡುವಂತಿಲ್ಲ. ದಹನದ ವೆಚ್ಚದಿಂದ ವಿನಾಯಿತಿ ನೀಡಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಒಂದು ಮೃತದೇಹದ ದಹನಕ್ಕೆ ಕುಟುಂಬಸ್ಥರು 250 ರೂ ಪಾವತಿಸಬೇಕು. ಈಗ ಆ ಹಣಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇನ್ನುಳಿದಂತೆ ಚಟ್ಟಕ್ಕೆ ತಗಲುವ ವಚ್ಚ 900 ರೂ, ಶವಸಂಸ್ಕಾರದ ನಂತರ ಬೂದಿ ಸಂಗ್ರಹಿಸುವ ಪಾತ್ರೆಗೆ 100 ರೂ, ಸಿಬ್ಬಂದಿಗೆ 500 ರೂ ಪ್ರೋತ್ಸಾಹ ಧನ ಬಿಬಿಎಂಪಿ ಇಂದ ಪಾವತಿ ಮಾಡಲಾಗುತ್ತದೆ. ನೈಸರ್ಗಿಕ ವಿಕೋಪದಡಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ.
ಬಿಸಿಲುನಾಡು ರಾಯಚೂರು ಈಗ ಮಲೆನಾಡು ಆದಂತಾಗಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆಯು ಉತ್ತಮವಾಗಿ ಸುರಿಯುತ್ತಿದೆ. ಈಗಾಗಲೇ ಬಿತ್ತನೆ ಮಾಡಿದ ಬೆಳೆಯು ನಾಶವಾಗುವ ಭೀತಿ, ಹಳ್ಳ-ಕೊಳ್ಳಗಳು ತುಂಬಿಕೊಂಡಿವೆ. ಮೈದುಂಬಿದ ಜಲಪಾತ ನೋಡಲು ಹೋಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ನಗರ ಪ್ರದೇಶದಲ್ಲಿ ಚರಂಡಿ ನೀರು ಹಾಗು ಮಳೆ ನೀರು ಸೇರಿಕೊಂಡು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಮನೆಯೊಳಗೆ ನೀರು ತುಂಬಿಕೊಂಡಿದ್ದರಿಂದ ಮನೆಯ ನೀರನ್ನು ಹೊರಹಾಕಲು ಸಾಹಸ ಪಡಬೇಕಾಗಿದೆ. ನಗರ ಪ್ರದೇಶದ ರಸ್ತೆಗಳು ಸಹ ಗುಂಡಿಗಳಾಗಿವೆ. ನಗರಸಭೆಯ ನಿರ್ಲಕ್ಷ್ಯ ಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಕೇವಲ 24 ಗಂಟೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ.
ಕಲಬುರ್ಗಿ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದೆ. ಪಕ್ಕದ ಜಿಲ್ಲೆಗಳಲ್ಲಿಯೂ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಳ್ಳ-ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಹೀಗೆ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನು ವಾಹನದ ಮೂಲಕ ದಾಟಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಐವರನ್ನು ಗ್ರಾಮಸ್ಥರು ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ.
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಮತ್ತೊಮ್ಮೆ ಫೇಸ್ಬುಕ್ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾನು ಪಬ್ಲಿಸಿಟಿಗೋಸ್ಕರ ಇದನ್ನ ಮಾಡುತ್ತಿಲ್ಲ. ನಾನು ಸುದೀಪ್ ಕಡೆಯಿಂದ ಆರ್ಥಿಕ ಸಹಾಯಕ್ಕಾಗಿ ಈ ರೀತಿ ನಾಟಕ ಮಾಡುತ್ತಿದ್ದೇನೆ ಅನ್ನೋದು ಸುಳ್ಳು. ನಾನು ಹಣಕಾಸಿನ ವಿಚಾರದಲ್ಲಿ ಚೆನ್ನಾಗಿದ್ದೇನೆ. ಆದರೆ ಮಾನಸಿಕವಾಗಿ ನೊಂದಿದ್ದೇನೆ. ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಡಿಪ್ರೆಶನ್ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಸಾಯಬೇಕು ಎಂದು ಹೇಳಿಕೊಂಡಿದ್ದಾರೆ.