Evening Digest: ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನ; ಕ್ರೇನ್ ಕುಸಿದು 11 ಮಂದಿ ಸಾವು; ಇಲ್ಲಿವೆ ಇಂದಿನ ಟಾಪ್ 10 ಸುದ್ದಿಗಳು
News18 Kannada | August 1, 2020, 6:10 PM IST
1/ 10
ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜವಾದಿ ಪಕ್ಷದ ಮಾಜಿ ನಾಯಕ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಸಿಂಗ್ ಅವರಿಗೆ 64 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
2/ 10
ಆಂಧ್ರದ ವಿಶಾಖಪಟ್ಟಣಂನಲ್ಲಿರುವ ಹಿಂದೂಸ್ತಾನ್ ಶಿಪ್ಯಾರ್ಡ್ ಬಳಿ ಬೃಹತ್ ಕ್ರೇನ್ವೊಂದನ್ನು ಸ್ಥಾಪಿಸುವ ವೇಳೆ ಅದು ಕುಸಿದುಬಿದ್ದು ಹನ್ನೊಂದು ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಅಪಾಯ ಇದೆ.
3/ 10
ಪಂಜಾಬ್ನಲ್ಲಿ ನಕಲಿ ಮದ್ಯ ಸೇರವಿಸಿ ಬರೋಬ್ಬರಿ 38 ಮಂದಿ ಅಸುನೀಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ನೀಡಿದ್ದಾರೆ. ಕಳೆದ ಬುಧವಾರ ರಾತ್ರಿಯಿಂದ ಪಂಜಾಬ್ನ ಕೆಲ ಜಿಲ್ಲೆಗಳಲ್ಲಿ ಸಾವು ಸಂಭವಿಸಲು ಆರಂಭವಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ನಕಲಿ ಮದ್ಯ ಸೇವನೆಯೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ತರ್ಣ್ ತರಣ್ ಜಿಲ್ಲೆಯಲ್ಲಿ 13, ಅಮೃತಸರದಲ್ಲಿ 11 ಹಾಗೂ ಬಟಾಲಾದಲ್ಲಿ 8 ಜನರು ಮೃತಪಟ್ಟಿದ್ದಾರೆ.
4/ 10
ಭಾರತದಲ್ಲಿ ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮಾತ್ರ ದಾಖಲಾಗಿದ್ದವು. ನಂತರ ನೋಡನೋಡುತ್ತಿದ್ದಂತೆ ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದವು. ಅದಾದಮೇಲೆ ಜುಲೈ 20ರಿಂದ 37 ಸಾವಿರಕ್ಕೂ ಪ್ರಕರಣಗಳು ಪತ್ತೆಯಾದವು ಈಗ ಜುಲೈ 31ಕ್ಕೆ 57,117 ಪ್ರಕರಣಗಳು ಕಂಡುಬಂದಿದ್ದು ದೇಶದ ಕೊರೊನಾ ಪೀಡಿತರ ಸಂಖ್ಯೆ 16,95,988ಕ್ಕೆ ಏರಿಕೆಯಾಗಿದೆ.
5/ 10
ಚನ್ನರಾಯಪಟ್ಟಣ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಕಿರಣ್ ಆತ್ಮಹತ್ಯೆ ಪ್ರಕರಣ ಸಂಪೂರ್ಣ ತನಿಖೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಎಚ್ಡಿಕೆ ಅವರು, ಹಾಸನ ಜಿಲ್ಲೆ ಚನ್ನರಾಯಪಟ್ಟಣ ಪಿ.ಎಸ್.ಐ ಕಿರಣ್ಕುಮಾರ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಬಿಜೆಪಿ ಸರ್ಕಾರ ಉನ್ನತಮಟ್ಟದ ತನಿಖೆಗೆ ತಕ್ಷಣ ಆದೇಶಿಸಬೇಕು. ಪೊಲೀಸರು ಮತ್ತು ಹಿರಿಯ ಪೊಲೀಸ್ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುವ ಪರಿಸ್ಥಿತಿಯಲ್ಲಿ ಅವರ ಆತ್ಮಾಭಿಮಾನ, ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದೇ ಪಿಎಸ್ಐ ಆತ್ಮಹತ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಹಾಗಾಗಿ, ಸೂಕ್ತ ತನಿಖೆಗೆ ಆದೇಶಿಸುವ ಮೂಲಕ ಕಿರಿಯ ಹಂತದ ಪೊಲೀಸ್ ಅಧಿಕಾರಿಗಳಲ್ಲಿ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
6/ 10
ಗಿ ಬ್ಯಾಟನ್ ಕೊಟ್ಟು ನಿರ್ಗಮಿಸಿದ ಭಾಸ್ಕರ್ ರಾವ್ ಬೆಂಗಳೂರು(ಆ. 01): ನಗರದ ನೂತನ ಸಿಟಿ ಪೊಲೀಸ್ ಕಮಿಷನರ್ ಆಗಿ ಕಮಲ್ ಪಂತ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಇಂದು ಅಧಿಕಾರ ಹಸ್ತಾಂತರ ನಡೆಯಿತು. ನಿರ್ಗಮಿತ ಭಾಸ್ಕರ್ ರಾವ್ ಅವರ ಸ್ಥಾನವನ್ನು ಕಮಲ್ ಪಂತ್ ತುಂಬಿದ್ದಾರೆ. ನಿರ್ಗಮನದ ಕೊನೆಯ ಕ್ಷಣದಲ್ಲಿ ಭಾಸ್ಕರ್ ರಾವ್ ಭಾವುಕರಾದ ದೃಶ್ಯಕ್ಕೂ ಈ ಕಾರ್ಯಕ್ರಮ ಸಾಕ್ಷಿಯಾಯಿತು
7/ 10
ತೀವ್ರ ಕೋವಿಡ್-19 ಆತಂಕದ ನಡುವೆಯೂ ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಈ ಮಳೆಯಿಂದ ಕೊರೋನಾ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದಲೇ ಜನ ಭಾರೀ ಆತಂಕದ ಮಧ್ಯೆ ಕಾಲ ಕಳೆಯುವಂತಾಗಿದೆ. ಶಿವಮೊಗ್ಗ, ಮಂಗಳೂರು, ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಮೈಸೂರು ಸೇರಿದಂತೆ ಹಲವೆಡೆ ಜೋರು ಮಳೆ ಸುರಿಯುತ್ತಿದೆ.
8/ 10
ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಆನ್ಲೈನ್ ಶಿಕ್ಷಣ ಆರಂಭಿಸಿದೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು, ಪೋಷಕರು ಆನ್ಲೈನ್ ಶಿಕ್ಷಣ ಕಲಿಕೆಗಾಗಿ ಸಂಕಷ್ಟ ಪಡುವಂತಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಸಹೋದರಿಯರಿಬ್ಬರು ಆನ್ಲೈನ್ ತರಗತಿಗಾಗಿ ಕೂಲಿ ಮಾಡಿ ಹಣ ಕೂಡಿಟ್ಟು ಮೊಬೈಲ್ ಖರೀದಿಸಿದ್ದಾರೆ. ಹಗಲಲ್ಲಿ ಕೂಲಿ ಕೆಲಸ ಮಾಡಿ, ರಾತ್ರಿ ಮತ್ತು ಬೆಳಿಗ್ಗೆ ಆನ್ಲೈನ್ ತರಗತಿಗಳನ್ನು ಆಫ್ಲೈನ್ನಲ್ಲಿ ಕೇಳಿಕೊಂಡು ಕಲಿಯುತ್ತಿದ್ದಾರೆ.
9/ 10
ದರ್ಶನ್ ಅಭಿನಯದ ಹಾಗೂ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ ಕೊರೋನಾ ಲಾಕ್ಡೌನ್ನಿಂದಾಗಿ ಇನ್ನೂ ರಿಲೀಸ್ ಆಗಿಲ್ಲ. ಆದರೆ ಇದೇ ತಂಡ ಈಗ ಮತ್ತೊಂದು ಹೊಸ ಚಿತ್ರದ ಕೆಲಸ ಆರಂಭಿಸಿದೆ. ಹೌದು, ತರುಣ್ ಸುಧೀರ್ ನಿರ್ದೇಶನದಲ್ಲಿ ಡಿಬಾಸ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.
10/ 10
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಹುಭಾಷಾ ನಟಿ ತಮನ್ನಾ ಭಾಟಿಯಾ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಆನ್ಲೈನ್ನಲ್ಲಿ ಜೂಜಾಟವನ್ನು ಉತ್ತೇಜಿಸುತ್ತಿದ್ದಾರೆ ಎಂದು ಕೊಹ್ಲಿ ಹಾಗೂ ನಟಿ ತಮನ್ನಾ ಭಾಟಿಯಾ ಅವರನ್ನು ಬಂಧಿಸಬೇಕೆಂದು ಅರ್ಜಿಯಲ್ಲಿ ಮನವಿಯನ್ನು ಸಲ್ಲಿಸಲಾಗಿದೆ.