ಹಲವಾರು ಮಂದಿ ಜಿಲ್ಲಾ ಉಸ್ತುವಾರಿ ಸಚಿವರು, ಹಲವಾರು ಮಂದಿ ಜಿಲ್ಲಾಧಿಕಾರಿಗಳು ಆಡಳಿತ ನಡೆಸಿಹೋಗಿದ್ದರೂ ಕ್ರೀಡಾಂಗಣ ಕಾಮಗಾರಿ ಮಾತ್ರ ಪೂರ್ಣಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ ಚಾಮರಾಜನಗರ ಜಿಲ್ಲಾ ಕ್ರೀಡಾಂಗಣ. ಹಿಂದೆ ಇದು ಊರಕೆರೆಯಾಗಿತ್ತು 1999 ರಲ್ಲಿ ವಾಟಾಳ್ ನಾಗರಾಜ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಚಾಮರಾಜನಗರದ ಈ ಊರ ಕೆರೆಯ ಜಾಗವನ್ನು 25 ಎಕರೆ ಜಿಲ್ಲಾ ಕ್ರೀಡಾಂಗಣಕ್ಕು, ಮೂರು ಎಕರೆಯನ್ನ ಖಾಸಗಿ ಬಸ್ ನಿಲ್ದಾಣಕ್ಕೂ ಮಂಜೂರು ಮಾಡಲಾಗಿತ್ತು.
ಹಾಕಿ, ಕ್ರಿಕೆಟ್, ಬ್ಯಾಸ್ಕೆಟ್ ಬಾಲ್, ಸ್ವಿಮಿಂಗ್ ಪೂಲ್, ಕಬ್ಬಡ್ಡಿ, ವಾಲಿಬಾಲ್, ಫುಟ್ ಬಾಲ್ ಸೇರಿದಂತೆ ಎಲ್ಲಾ ಕ್ರೀಡೆಗಳಿಗೂ ಅನುಕೂಲವಾಗುವಂತೆ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದಾಗಿತ್ತು. ಆದರೆ ಕ್ರೀಡಾಂಗಣ ಕಾಮಗಾರಿ ಆರಂಭವಾಗಿ 21 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಯಾವುದೇ ಅಂಗಣದ ಕಾಮಗಾರಿ ಪೂರ್ಣಗೊಂಡಿಲ್ಲ. ಒಂದೆಡೆ ಬಾಕಿ ಉಳಿದಿರುವ ಪ್ರೇಕ್ಷಕ ಗ್ಯಾಲರಿಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ಈಗಾಗಲೇ ನಿರ್ಮಾಣವಾಗಿರುವ ಪ್ರೇಕ್ಷಕರ ಗ್ಯಾಲರಿ ಕುಸಿಯುತ್ತಾ ಹೋಗುತ್ತಿದೆ.
1999 ರಲ್ಲಿ ಪ್ರಾರಂಭವಾದ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಪುರಸ್ಕೃತ ಯೋಜನೆಯಡಿ 3.20 ಕೋಟಿ ರೂಪಾಯಿ, ಮುಖ್ಯಮಂತ್ರಿಗಳ ವಿಶೇಷ ಅನುದಾನ, ಸಂಸದರು ಶಾಸಕರ ಅನುದಾನ ಸೇರಿದಂತೆ ಈವರೆಗೆ ಹದಿನೈದು ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚಾಗಿದ್ದರೂ ಒಳಾಂಗಣ ಹೊರತುಪಡಿಸಿ ಕ್ರೀಡಾಂಗಣ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಇದರ ಜೊತೆಗೆ ಕೇಂದ್ರ ಪುರಸ್ಕೃತ ಯೋಜನೆಯಡಿ 5.50ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಗೊಂಡಿದ್ದರೂ ಸಹ ನಿರ್ವಹಣೆ ಇಲ್ಲದೆ ಹಾಳಾಗಿ ಹೋಗುತ್ತಿದೆ. ಸಾಕಷ್ಟು ಹಣ ಖರ್ಚಾಗಿದ್ದರೂ ಈಜುಕೊಳ ನಾಪತ್ತೆಯಾಗಿದೆ, ಕ್ರೀಡಾ ಸಲಕರಣೆಗಳು ತುಕ್ಕು ಹಿಡಿಯುತ್ತಿವೆ, ಅರ್ಧಕರ್ಧ ಕ್ರೀಡಾಂಗಣ ಪಾಳುಬಿದ್ದಿದೆ.
ಕೋಟಿ ಕೋಟಿ ಖರ್ಚಾಗಿದ್ದರು ಕನಿಷ್ಟ ಕುಡಿಯುವ ನೀರಿನ ಸೌಲಭ್ಯ ಇಲ್ಲ, ಶೌಚಾಲಯ ಇದ್ದರೂ ನೀರಿನ ಸಂಪರ್ಕ ಇಲ್ಲದೆ ಉಪಯೋಗವಿಲ್ಲ. ರಾಷ್ಟ್ರೀಯ ಹಬ್ಬಗಳಂದು ಮಾತ್ರ ಜಿಲ್ಲಾಡಳಿತಕ್ಕೆ ಬಂದು ದ್ವಜಾರೋಹಣ ಮಾಡಿ ಹೋಗುವ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಹಲವಾರು ಮಂದಿ ಜಿಲ್ಲಾ ಉಸ್ತುವಾರಿ ಸಚಿವರು, ಹಲವಾರು ಮಂದಿ ಜಿಲ್ಲಾಧಿಕಾರಿಗಳು ಆಡಳಿತ ನಡೆಸಿದ್ದರೂ ಕ್ರೀಡಾಂಗಣ ಮಾತ್ರ ಪೂರ್ಣಗೊಳ್ಳದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಇದುವರೆಗೆ ನಡೆದಿರುವ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರವೇ ನಡೆದಿದೆ ಎಂದು ಕ್ರೀಡಾಂಗಣ ಸಮಿತಿ ಸದಸ್ಯರೂ ಆದ ಮೈಸೂರು ವಿ.ವಿ. ಮಾಜಿ ಕ್ರಿಕೆಟ್ ಆಟಗಾರ ವಿ. ಶ್ರೀನಿವಾಸಪ್ರಸಾದ್ ಆರೋಪಿಸಿದ್ದು, ಉನ್ನತ ಮಟ್ಟದ ತನಿಖೆ ನಡೆಸಬೇಕು, ತಪ್ಪಿತಸ್ಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು, ಕಾಮಗಾರಿಗಳಿಗೆ ವೇಗ ನೀಡಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.