ಕರ್ನಾಟಕ ಬಂದ್ಗೆ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ ಕಾಲಿಗೆ ಬೆಂಕಿ ತಗುಲಿದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಜ್ಯುಬಿಲಿ ಸರ್ಕಲ್ನಲ್ಲಿ ಪ್ರತಿಭಟನೆ ಮಾಡಲು ಮುಂದಾದ ಬಿಜೆಪಿ ಕಾರ್ಯಕರ್ತರು ಟಯರ್ಗೆ ಪೆಟ್ರೊಲ್ ಹಾಕಿ ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಕಾರ್ಯಕರ್ತ ಬಸವರಾಜ ಇಂದೂರ ಅವರ ಬಲಗಾಲಿಗೆ ಬೆಂಕಿ ತಗುಲಿದೆ. ಅವರ ಚಪ್ಪಲಿಗೆ ಬೆಂಕಿ ಹತ್ತಿ ಉರಿಯುತ್ತಿದ್ದಂತೆಯೇ ಅವರು ಚಪ್ಪಲಿ ಕಳಚಿ ಹೆಚ್ಚಿನ ಅನಾಹುತದಿಂದ ಬಚಾವ್ ಆದರು. ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಟೈರ್ ತೆರವುಗೊಳಿಸಿದರು.
ಬಂದ್ ಹಿನ್ನೆಲೆಯಲ್ಲಿ ವಿ.ಪ. ಸದಸ್ಯ ಬಿ.ಜಿ. ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಲಬುರ್ಗಿ ನಗರದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಪಾಟೀಲ್ ಸೇರಿ ನೂರಕ್ಕೂ ಹೆಚ್ಚು ಕಾರ್ಯಕರ್ತರ ಬಂಧನವಾಯಿತು. ಇನ್ನೊಂದೆಡೆ, ಸರ್ದಾರ್ ವಲ್ಲಭಬಾಇ ಪಟೇಲ್ ಸರ್ಕಲ್ನಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಯಚೂರು ನಗರದ ಪಟೇಲ್ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿಸಲು ಪ್ರಯತ್ನಿಸಿದರು. ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಇಲ್ಲಿಯ ಪಟೇಲ್ ರಸ್ತೆ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರ ಸಮ್ಮುಖದಲ್ಲೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲು ಕಾರ್ಯಕರ್ತರು ಪ್ರಯತ್ನಿಸಿದ್ದು ಕಂಡುಬಂತು.