ಬೆಂಗಳೂರಿನ ರೋಡ್ ಶೊ ವೇಳೆ ಮೋದಿ ಪಕ್ಕದಲ್ಲಿ ಸದಾನಂದ ಗೌಡರು, ಆ ಭಾಗದ ಎಂಪಿ ಅನ್ನೋ ಕಾರಣಕ್ಕೆ, ಆದರೆ ಮತ್ತೊಂದು ಪಕ್ಕದಲ್ಲಿ ಛಲವಾದಿ ನಾರಾಯಣ ಸ್ವಾಮಿ ಕೂಡ ಇದ್ದದ್ದು ಗಮನ ಸೆಳೆದಿದೆ. ಇಲ್ಲಿರೋ ಲೆಕ್ಕಾಚಾರ ಇಷ್ಟೇ. ಯಲಹಂಕ, ಯಶವಂತಪುರ, ಆರ್ ಆರ್, ಮಹಾಲಕ್ಷ್ಮಿ ಲೇಔಟ್ ದಾಸರಹಳ್ಳಿ ಕ್ಷೇತ್ರದಲ್ಲಿ ದಲಿತ ವೋಟ್ ನಿರ್ಣಾಯಕ. ಆ ಸಮುದಾಯ ಪ್ರತಿನಿಧಿಸುವ ಛಲವಾದಿಯವರಿಗೆ, ರೋಡ್ ಶೊದಲ್ಲಿ ಮೋದಿ ಪಕ್ಕಕ್ಕೆ ನಿಲ್ಲಿಸಿ ಆ ಸಮುದಾಯದ ಮತ ಸೆಳೆಯುವ ಇರಾದೆಯಾಗಿದೆ.
ಇನ್ನು, ನಾಳೆಯೂ ಕರ್ನಾಟಕದಲ್ಲಿ ಮೋದಿ ಹವಾ ಮುಂದುವರೆಯಲಿದ್ದು, ಕೋಲಾರದಲ್ಲಿ ಬೆಳಗ್ಗೆ 11:30 - ಸಾರ್ವಜನಿಕ ಸಮಾವೇಶ, ಚನ್ನಪಟ್ಟಣ - ಮಧ್ಯಾಹ್ನ 1:30ಕ್ಕೆ ಸಾರ್ವಜನಿಕ ಸಮಾವೇಶ, ಬೇಲೂರಿನಲ್ಲಿ ಮಧ್ಯಾಹ್ನ 3:45ಕ್ಕೆ ಸಾರ್ವಜನಿಕ ಸಮಾವೇಶ ಏರ್ಪಡಿಸಲಾಗಿದೆ. ಆ ಬಳಿಕ ಸಂಜೆ 5:45ಕ್ಕೆ ಮೈಸೂರಿನಲ್ಲಿ ಬರೋಬ್ಬರಿ 11 ಕಿಲೋ ಮೀಟರ್ ರೋಡ್ ಶೋ ನಡೆಯಲಿದೆ. ಸಂಜೆ 7 ಗಂಟೆ ಬಳಿಕ ದೆಹಲಿಯತ್ತ ಮೋದಿ ಪ್ರಯಾಣ ಬೆಳೆಸಲಿದ್ದಾರೆ.
ಇನ್ನೂ ಇಂದು ಮೂರು ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು ಕಾಂಗ್ರೆಸ್ ವಿರುದ್ಧ ಪ್ರಮುಖವಾಗಿ ಮೂರು ಅಸ್ತ್ರಗಳನ್ನು ಪ್ರಯೋಗ ಮಾಡಿದ್ದರು. ಮೊದಲನೆಯದಾಗಿ, ಕೆಲಸ ಮಾಡುವವರನ್ನು ಅದರಲ್ಲೂ ಹಿಂದುಳಿದ ವರ್ಗದ ನಾಯಕರನ್ನ ಕಂಡರೆ ಕಾಂಗ್ರೆಸ್ಗೆ ಆಗೋದಿಲ್ಲ. ನನ್ನಂತಹವರನ್ನ ಬೈಯೋದಕ್ಕೆ ಒಂದು ಡಿಕ್ಷನರಿ ಮಾಡಿಕೊಂಡಿದ್ದಾರೆ ಅಂತ ಕುಟುಕಿದ್ದರು. ಈ ಮೂಲಕ ಜಾಗತಿಕ ನಾಯಕ, ಶ್ರಮಜೀವಿ ಅನ್ನೋ ಇಮೇಜ್ ಇಟ್ಟುಕೊಂಡಿರುವ ಪ್ರಧಾನಿಯನ್ನ ಬೆಂಬಲಿಸಬಲ್ಲ ಯುವ ಮತದಾರರ ಮೇಲೆ, ತಟಸ್ಥರಾಗಿರುವ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು.