ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಗೆ ಕೆಆರ್ ಸರ್ಕಲ್ನಲ್ಲಿ ಕಾರು ಮುಳುಗಡೆಯಾಗಿದ್ದು, ಈ ವೇಳೆ ಕಾರಿನಲ್ಲಿ ಸಿಲುಕಿದ್ದ ಇಡೀ ಕುಟುಂಬವನ್ನು ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಲ್ಲಿ ಯುವತಿಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂತ್ರಸ್ತ ಮಹಿಳೆಯೊಬ್ಬರು, ನಾವು ಆಂಧ್ರ ಪ್ರದೇಶ ವಿಜಯವಾಡ ಮೂಲದವರು. ಒಂದು ದಿನ ರಜೆ ಇದ್ದ ಬೆಂಗಳೂರಿನಲ್ಲಿ ಸ್ಥಳಗಳನ್ನು ನೋಡಲು ಕಾರಿನಲ್ಲಿ ಹೊರಗೆ ಬಂದಿದ್ದರು. ಮಳೆ ಆರಂಭವಾದ ಕಾರಣ ಕಬ್ಬನ್ ಪಾರ್ಕ್ನಿಂದ ಮನೆಗೆ ತೆರಳು ವಾಪಸ್ ಆಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಸದ್ಯ ನೀರನಲ್ಲಿ ಇನ್ನು ಒಬ್ಬರು ಸಿಲುಕಿದ್ದಾರೆ ಅಂತ ಕುಟುಂಬಸ್ಥರು ಹೇಳುತ್ತಿದ್ದು, ನಾವು ಕಾರಿನಲ್ಲಿ ಆರು ಮಂದಿ ತೆರಳುತ್ತಿದ್ದೇವು ಎಂದು ಕಣ್ಣೀರಿಟ್ಟಿದ್ದಾರೆ.
ಮೃತ ಯುವತಿಯನ್ನು 22 ವರ್ಷದ ಭಾನುರೇಖಾ ಎಂದು ಗುರುತಿಸಲಾಗಿದೆ. ಯುವತಿಯನ್ನು ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಬೆಂಗಳೂರಿನ ಸೈಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಯುವತಿಯನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಆದರೆ ಆಸ್ಪತ್ರೆ ಸಿಬ್ಬಂದಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆಟೋದಲ್ಲೇ ಕಾಯುವಂತೆ ಮಾಡಿದ್ದು, ಆ ಬಳಿಕ ಸ್ಥಳಕ್ಕೆ ಮಾಧ್ಯಮಗಳು ಹೋಗುತ್ತಿದ್ದಂತೆ ಯುವತಿಯನ್ನು ಚಿಕಿತ್ಸೆ ಕರೆದುಕೊಂಡು ಹೋಗಿದ್ದು, ಆ ವೇಳೆಗೆ ಯುವತಿ ಸಾವನ್ನಪ್ಪಿದ್ದರು ಎಂದು ಘೋಷಣೆ ಮಾಡಿದ್ದಾರೆ.