ಭಾನುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಇಡೀ ನಗರವೇ ಬೆಚ್ಚಿ ಬಿದ್ದಿದೆ. ಧಾರಾಕಾರ ಮಳೆಗೆ ರಸ್ತೆಗಳೆಲ್ಲ ಹೊಳೆಗಳಂತೆ ಕಂಡುಬಂತು. ಮೂರು ಗಂಟೆ ಸುಮಾರಿಗೆ ಭಾರೀ ಗಾಳಿ ಬೀಸಲು ಆರಂಭವಾಗಿತ್ತು. ಕಾರ್ಗತ್ತಲು ಬೆಂಗಳೂರನ್ನು ಆವರಿಸಿಕೊಳ್ಳಲು ಪ್ರಾರಂಭಿಸಿತ್ತು. ಇದು ಮಧ್ಯಾಹ್ನವೋ ಅಥವಾ ರಾತ್ರಿಯೋ ಎಂದು ಅನುಮಾನ ಮೂಡುವಷ್ಟು ಕತ್ತಲು ಆವರಿಸಿತ್ತು. ಈ ವೇಳೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲು ಪ್ರಾರಂಭವಾಗಿತ್ತು. ಗಾಳಿ-ಮಳೆಗೆ ಜನತೆ ನಿಜಕ್ಕೂ ಆತಂಕಗೊಂಡಿತ್ತು. ಇನ್ನು ಭಾರೀ ಪ್ರಮಾಣದ ಗುಡುಗು ಸಹಿತ ಕಾಣಿಸಿಕೊಂಡಿತ್ತು. ಇಂದು, ಸಂಪೂರ್ಣ ಲಾಕ್ಡೌನ್ ಇದ್ದಿದ್ದರಿಂದ ಬಹುತೇಕರು ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದರು. ಹೀಗಾಗಿ, ಮಳೆ ಸಾಮಾನ್ಯರಿಗೆ ಅಷ್ಟಾಗಿ ತೊಂದರೆ ಉಂಟು ಮಾಡಿಲ್ಲ. ಬೇಸಿಗೆಯ ಬಿಸಿಲಿಗೆ ತತ್ತರಿಸಿದ್ದ ಮಳೆಗೆ ಬೆಂಗಳೂರು ತಂಪಾಗಿದೆ. ಸಮಯ 3:30 ಆದರೂ ಮಳೆ ನಿಂತಿಲ್ಲ. ಶಿವಾಜಿ ನಗರ, ವಿಧಾನಸೌಧ, ರೇಸ್ಕೋರ್ಸ್ ರಸ್ತೆ, ಕೆಆರ್ ಸರ್ಕಲ್, ಗಿರಿ ನಗರ, ಹೊಸಕೆರೆ ಹಳ್ಳಿ ಭಾಗದಲ್ಲಿ ಭಾರೀ ಮಳೆ ಆಗಿದೆ. ಇಂದು ರಾತ್ರಿಯೂ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ. ಇನ್ನು, ಭಾರೀ ಗಾಳಿ ಮಳೆಗೆ ಸಾಕಷ್ಟು ಮರಗಳು ನೆಲಕ್ಕುರುಳಿದ್ದು, ಕಾರುಗಳು ಜಖಂ ಆಗಿವೆ. ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಕೂಡ ನೆಲೆಕ್ಕುರುಳಿದೆ