ಬೆಂಗಳೂರು: ನಂದಿನಿ ಉಳಿಸಿ ಅಭಿಯಾನ ಕರ್ನಾಟಕದಲ್ಲಿ ಜೋರಾಗುತ್ತಿದೆ. ಇದರ ಮಧ್ಯೆನೇ ಅಮುಲ್ ಮುಂದಿನ ವಾರದಿಂದ ಕರ್ನಾಟಕಕ್ಕೆ ಲಗ್ಗೆ ಹಾಕೋದಕ್ಕೆ ರೆಡಿಯಾಗಿದ್ದರೆ, ಕೆಎಂಎಫ್ ಅಮುಲ್ ಹೆಸರಲ್ಲಿ ಮತ್ತೆ ರಾಜಕೀಯ ರಂಗೀಲಾಲನೂ ಜೋರಾಗುತ್ತಿದೆ. ಹೌದು, ಕೆಎಂಎಫ್ ಉಳಿಸಿ ನಂದಿನಿ ಬೆಳೆಸಿ ಅನ್ನೋದು ಕೋಟಿ ಕೋಟಿ ಕನ್ನಡಿಗರ ಕೂಗು. ಕೆಎಂಎಫ್ ಜೊತೆ ಅಮುಲ್ ವಿಲೀನ ಆಗಬಾರದು ಅಂತಾನೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುಮಾಡಿದ್ದಾರೆ. ಇದರ ಮಧ್ಯೆನೇ ಕರ್ನಾಟಕದಲ್ಲಿ ಮುಂದಿನ ವಾರದಿಂದಲೇ ಆನ್ಲೈನ್ನಲ್ಲಿ ಅಮುಲ್ ಹಾಲು ಮಾರಾಟಕ್ಕೆ ಮುಕ್ತ ಅವಕಾಶ ಸಿಕ್ಕಿದೆ.
ವಿವಾದದ ಕುರಿತಂತೆ ಸ್ಪಷನೆ ನೀಡಿರುವ ಸಹಕಾರ ಸಚಿವ ಎಸ್ಟಿ ಸೋಮಶೇಖರ್, ಕರ್ನಾಟಕದಲ್ಲಿ ಸುಮಾರು 15 ಮಿಲ್ಕ್ ಯೂನಿಯನ್‌ಗಳಿವೆ. 15 ಮಿಲ್ಕ್ ಯೂನಿಯನ್ ಕೂಡ ಲಾಭದಲ್ಲಿದೆ. ಕೋವಿಡ್ ಸಮಯದಲ್ಲಿ ಹಾಲಿನ ಪೌಡರ್ ಉಳಿದಿತ್ತು. ಅದನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿ ಆ ದುಡ್ಡನ್ನು ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ಕೆಎಂಎಫ್‌ಗೆ ನೀಡಿದ್ದೇವು. ಕೋವಿಡ್ ಸಮಯದಲ್ಲಿ ಕೆಎಂಎಫ್ ಕಷ್ಟದಲ್ಲಿದ್ದಾಗ ಸರ್ಕಾರ ಬೆನ್ನೆಲುಬಾಗಿ ನಿಂತು ನಷ್ಟ ಭರಿಸುವ ಕೆಲಸ ಮಾಡಿದೆ.
ಕರ್ನಾಟಕವೂ ಸ್ಟ್ರಾಂಗ್ ಇದೆ, ಗುಜರಾತೂ ಸ್ಟ್ರಾಂಗ್ ಇದೆ. ನಾವು ಅಲ್ಲಿ, ಅವರು ಇಲ್ಲಿ ವಹಿವಾಟು ಮಾಡಬಾರದು ಅಂತ ಒಪ್ಪಂದ ಇರುತ್ತದೆ. ಅಮುಲ್ ಸ್ಪರ್ಧೆ ಒಡ್ಡುತ್ತಿದ್ದರೂ ಕೆಎಂಎಫ್ ಗೆ ಏನೂ ಮಾಡಕ್ಕಾಗಲ್ಲ. ಇದನ್ನು ರಾಜಕೀಯಕರಣ ಮಾಡಲಾಗ್ತಿದೆ. ಅಮುಲ್ ಬಗ್ಗೆ ಏನೇನೋ ಹೇಳ್ತಿದಾರೆ. ಅಮುಲ್ ಕೇವಲ ಆನ್ ಲೈನ್ ವ್ಯಾಪಾರ, ಅಮುಲ್ ಲೀಟರ್ಗೆ 54 ರೂಪಾಯಿ ಇದೆ, ನಂದಿನಿ 39 ರೂಪಾಯಿ ಇದೆ. ಯಾರೇ ಬಂದರೂ ನಂದಿನಿ ಬ್ರ್ಯಾಂಡ್ ಅಳಿಸಲು ಆಗಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಅಮುಲ್ ಹಾಲು ಕರ್ನಾಟಕದಲ್ಲಿ ಸೇಲ್ ಆಗಲಿದೆ. ಮುಂದಿನ ವಾರದಿಂದಲೇ ಅಮುಲ್ ಹಾಲು ಮಾರಾಟ ಶುರುವಾಗುತ್ತೆ. ಇ-ಕಾಮರ್ಸ್ ಮೂಲಕ ಅಮುಲ್ ಹಾಲು ಸೇಲ್ ಮಾಡುತ್ತೇವೆ. ಅಮುಲ್ ಮತ್ತು ಕೆಎಂಎಫ್ ಎರಡೂ ಪ್ರತ್ಯೇಕ ಸಂಸ್ಥೆಗಳು. ಅಮುಲ್ ಮತ್ತು ಕೆಎಂಎಫ್ ಸಂಬಂಧ ಚೆನ್ನಾಗಿದೆ. ಕೆಎಂಎಫ್‌ಗೆ ಅನಾರೋಗ್ಯಕರ ಪೈಪೋಟಿ ನೀಡಲ್ಲ. ಇದು ಅಮುಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಕೊಟ್ಟಿರುವ ಹೇಳಿಕೆ.
ಕೆಎಂಎಫ್ ಹಾಲಿಗೆ ಪೈಪೋಟಿ ಕೊಡಲ್ಲ ಅಂತಾನೇ ಅಮುಲ್ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದೆ. ಈ ಬಗ್ಗೆ ಸಹಕಾರ ಸಚಿವರನ್ನ ಕೇಳಿದರೆ ಅವರು ಕೆಎಂಎಫ್ ಜೊತೆ ಅಮುಲ್ ವಿಲೀನ ಆಗಲ್ಲ. ಮಾರುಕಟ್ಟೆ ವಿಸ್ತರಣೆ ಅಷ್ಟೇ ಅಂತಿದ್ದಾರೆ. ಆದರೆ ಸಚಿವರು ಏನೇ ಸಮರ್ಥನೆ ಮಾಡಿಕೊಂಡರೂ ಕೆಎಂಎಫ್ ಜೊತೆ ಅಮುಲ್ ವಿಲೀನ ಆಗೋದು ನಿಶ್ಚಿತ ಅನ್ನೋದು ಕಾಂಗ್ರೆಸ್ ಮಾತು. ಈಗ ಆನ್ಲೈನ್ ಆಮೇಲೆ ವಿಲೀನ ಆಗುತ್ತೆ ಅಂತಿರುವ ಕಾಂಗ್ರೆಸ್ ಸಾಲು ಸಾಲು ಟ್ವೀಟ್ ಹಾಕಿದೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ನಂದಿನಿ ಡೈರಿ ಬೂತ್ಗೆ ಭೇಟಿ ನೀಡಿ ವಸ್ತುಗಳನ್ನು ಖರೀದಿ ಮಾಡಿದ್ದಾರೆ.
ಕಾರ್ಪೊರೇಟ್ ಕಂಪೆನಿಯ ರೀತಿ ಅಮುಲ್ ದಾಳಿ ಮಾಡುತ್ತಿರುವ ಹಿಂದೆ ಕರ್ನಾಟಕದ ಕೋಅಪರೇಟಿವ್ ವ್ಯವಸ್ಥೆಯನ್ನ, ಸಣ್ಣ ರೈತರ ಬದುಕನ್ನು ನಾಶಗೊಳಿಸುವ ಹುನ್ನಾರ ಅಡಗಿದೆ. ಸೇವ್ ನಂದಿನಿ ಅಂತ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. "ನಂದಿನಿ" ಎಂದರೆ ಬರೀ ಹಾಲಲ್ಲ, ರಾಜ್ಯದ ರೈತರ ಬೆವರು, ಬದುಕು, ಭವಿಷ್ಯ. ನಂದಿನಿಯನ್ನು ನಂಬಿ ಬದುಕುವ ಕೋಟ್ಯಂತರ ರೈತರ ಬೆನ್ನಿಗೆ ಚೂರಿ ಹಾಕಲು ಹೊರಟಿದ್ದಾರೆ ಈ ರಾಜ್ಯದ ದ್ರೋಹಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ನೀವೆಷ್ಟೇ ಗುಲಾಮಗಿರಿ ಮಾಡಿದರೂ ನಿಮಗೆ ಮಣೆ ಹಾಕುವುದಿಲ್ಲ. ರಾಜ್ಯದ ರೈತರ ಹಿತ ಬಲಿ ಕೊಡುತ್ತಿರುವುದು ಅಕ್ಷಮ್ಯ ಅಂತಾನೂ ಕಾಂಗ್ರೆಸ್ ಟ್ವೀಟ್ ಆಕ್ರೋಶ ಹೊರಹಾಕಿದೆ.
ಸಿದ್ದರಾಮಯ್ಯ ಕೂಡ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿಯವರೇ ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು. ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ? ಅಂತ ಸಾಲು ಸಾಲು ಟ್ವೀಟ್ ಹಾಕಿದ್ದಾರೆ. ಅಮುಲ್ ಸಂಸ್ಥೆ ಆನ್ಲೈನ್ ಮಾರಾಟಕ್ಕೆ ಕನ್ನಡಿಗರ ವಿರೋಧವಿಲ್ಲ. ಆದರೆ ಅಮುಲ್ ಜೊತೆ ಕೆಎಂಎಫ್ ವಿಲೀನ ಆಗಬಾರದು. ರೈತರಿಗೆ ಅನ್ಯಾಯ ಆಗಬಾರದು. ನಂದಿನಿ ಬ್ರ್ಯಾಂಡ್ ವಿಶ್ವಮಟ್ಟದಲ್ಲಿದ್ದು ಆ ಸ್ಥಾನಕ್ಕೆ ಚ್ಯುತಿ ಬರಬಾರದು ಅಷ್ಟೇ ಕನ್ನಡಿಗರ ಆಗ್ರಹ.