ಈ ವೇಳೆ ಯಡಿಯೂರಪ್ಪ ಅವರು ಅಮಿತ್ ಶಾ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲು ಮುಂದಾದರು. ಆಗ ಅಮಿತ್ ಶಾ, ಬಿಎಸ್‌ವೈಗೆ ‘ನಿಮ್ಮ ಕೈಲಿದ್ದ ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿ’ ಎಂದು ಕೈಸನ್ನೆ ಮಾಡಿದರು. ಅದೇನು ಎಂದು ಅರ್ಥವಾಗದ ಬಿಸ್‌ವೈಗೆ ಏನು ಮಾಡಬೇಕೆಂದು ತೋಚಲಿಲ್ಲ. ಪುನಃ ಅಮಿತ್ ಶಾ ಕೈಸನ್ನೆ ಮಾಡಿದಾಗ ಅರ್ಥ ಮಾಡಿಕೊಂಡ ಬಿಸ್‌ವೈ ಹೂಗುಚ್ಛವನ್ನು ವಿಜಯೇಂದ್ರಗೆ ನೀಡಿದರು.
ಸದ್ಯ ಅಮಿತ್ ಶಾ ಅವರು ಬಿವೈ ವಿಜಯೇಂದ್ರ ಜೊತೆ ಆತ್ಮೀಯವಾಗಿ ನಡೆದುಕೊಂಡಿರುವ ರೀತಿ ಬಿಎಸ್‌ವೈ ಪುತ್ರನಿಗೆ ಹೊಸ ಆತ್ಮವಿಶ್ವಾಸ ತುಂಬಿದ್ರೆ, ಅತ್ತ ಬಿಜೆಪಿಯ ಒಳಗಿರುವ ವಿಜಯೇಂದ್ರ ವಿರೋಧಿಗಳಿಗೆ ನಡುಕ ಶುರುವಾಗಿದೆ. ಬಿಎಸ್‌ವೈ ನಂತರ ಅವರ ಪುತ್ರ ವಿಜಯೇಂದ್ರ ಮುನ್ನೆಲೆಗೆ ಬರುತ್ತಾರೆ ಎಂಬುದನ್ನು ಅರಿತಿರುವ ವಿರೋಧಿಗಳು ಈಗಾಗಲೇ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ.
ಇನ್ನೊಂದೆಡೆ ವಿಜಯೇಂದ್ರ ಅವರನ್ನು ರಾಜ್ಯ ರಾಜಕೀಯದಲ್ಲಿ ಮುನ್ನೆಲೆಗೆ ತರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈಗಾಗಲೇ ತನಗೆ ನೀಡಿರುವ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ವಿಜಯೇಂದ್ರ ತಾನೊಬ್ಬ ಉತ್ತಮ ಸಂಘಟಕ ಅನ್ನೋದನ್ನು ನಿರೂಪಿಸಿದ್ದಾರೆ. ಹೀಗಾಗಿ ವಿಜಯೇಂದ್ರ ಅವರನ್ನು ಮುನ್ನೆಲೆಗೆ ತಂದರೆ ಪಕ್ಷ ಸಂಘಟನೆಗೂ ಬಲ ಸಿಗುವ ಸಾಧ್ಯತೆ ಇದೆ. ಹೀಗಾಗಿಯೇ ಅಮಿತ್ ಶಾ ವಿಜಯೇಂದ್ರಗೆ ಮನ್ನಣೆ ನೀಡಿದ್ದಾರೆ ಎನ್ನಲಾಗ್ತಿದೆ.