ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ವಿಕೆಟ್ ಕಳೆದುಕೊಂಡು 223 ರನ್ ಗಳ ಬೃಹತ್ ಮೊತ್ತ ದಾಖಲಿಸಿತ್ತು. ನಾಯಕಿ ಲ್ಯಾನಿಂಗ್ 43 ಎಸೆತಗಳಲ್ಲಿ 72, ಶೆಫಾಲಿ ವರ್ಮಾ 45 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 84, ಮರಿಝಾನ್ ಕಾಪ್ 17 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ಗಳ ನೆರವಿನಿಂದ ಅಜೇಯ 33 ಜಮಿಮಾ ರೋಡ್ರಿಗ್ರಸ್ 15 ಎಸೆತಗಳಲ್ಲಿ 22 ರನ್ಗಳಿಸಿದ್ದರು.
ಬೆಂಗಳೂರು ಪರ ನಾಯಕಿ ಸ್ಮೃತಿ ಮಂಧಾನ 35 ರನ್, ಎಲಿಸ್ ಪೆರ್ರಿ 31 ರನ್, ಹೀದರ್ ನೈಟ್ 34 ಮತ್ತು ಮೇಗಾನ್ ಶೂಟ್ ಅಜೇಯ 30 ರನ್ಗಳಿಸಿ ಹೋರಾಟ ಮಾಡಿದರೂ ಗೆಲುವಿನ ದಡ ದಾಟಿಸಲು ಸಫಲವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆದರೆ ಮೊದಲ ಇನ್ನಿಂಗ್ಸ್ನಲ್ಲಿ ಬೌಲಿಂಗ್ ವೈಫಲ್ಯ ಅನುಭವಿಸಿದ ಕಾರಣ ಬೃಹತ್ ಮೊತ್ತ ಚೇಸ್ ಮಾಡಲು ಆರ್ಸಿಬಿಗೆ ಸಾಧ್ಯವಾಗಲಿಲ್ಲ.
ಆರ್ಸಿಬಿ ಮಹಿಳಾ ತಂಡ ಈ ಪಂದ್ಯದಲ್ಲಿ ಸೋಲುವ ಮೂಲಕ 15 ವರ್ಷಗಳ ಹಿಂದಿನ ಪುರುಷರ ಪಂದ್ಯವನ್ನು ನೆನಪಿಸಿತು. 2008ರಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ಬ್ರೆಂಡನ್ ಮೆಕಲಮ್ ಅವರ ಸ್ಫೋಟಕ ಶತಕದ ನೆರವಿನಿಂದ 222 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಬೆಂಗಳೂರು ಕೇವಲ 82 ರನ್ಗಳಿಗೆ ಸರ್ವಪತನ ಕಂಡು 140 ರನ್ಗಳ ಹೀನಾಯ ಸೋಲು ಕಂಡಿತ್ತು.