ಅಂದು ಪೇಪರ್ ಹಾಕುವ ಹುಡುಗ, ಇಂದು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ..!
ಈಗ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಸಹೋದರಿಯ ಮದುವೆ ಮಾಡಿದ್ದೇನೆ. ತಮ್ಮ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ನನ್ನ ಹಿಂದಿನ ದಿನಗಳನ್ನು ನೆನೆಸಿಕೊಂಡಾಗ ಈಗಲೂ ರೋಮಾಂಚನವಾಗುತ್ತದೆ.
News18 Kannada | August 28, 2020, 7:34 PM IST
1/ 10
ಒಂದು ಕಾಲದಲ್ಲಿ ಮನೆಮನೆಗೆ ಪೇಪರ್ ಹಾಕುತ್ತಿದ್ದ ಹುಡುಗ. ಎಲ್ಲರೂ ಇಂದು ಪೇಪರ್ ಹಾಕುವ ಹುಡುಗ ಬಂದಿಲ್ಲವೇ? ಎಂದೇ ಪ್ರಶ್ನಿಸುತ್ತಿದ್ದರು. ಆತನಿದ್ದ ಏರಿಯಾದ ಅರ್ಧ ಮನೆಯವರಿಗೆ ಅವನ ಹೆಸರೂ ಕೂಡ ಗೊತ್ತಿರಲಿಲ್ಲ. ಎಲ್ಲರಿಗೂ ಪೇಪರ್ ಹುಡುಗ ಎಂದೇ ಕರೆದು ಅಭ್ಯಾಸವಾಗಿತ್ತು.
2/ 10
ಅದೇ ಪೇಪರ್ ಹುಡುಗ ಇಂದು ದೇಶದ ಅತ್ಯುನ್ನತ ಗೌರವಕ್ಕೆ ಪಾತ್ರನಾಗಿದ್ದಾನೆ. ಹೌದು, ಸಾಧಿಸುವ ಛಲವೊಂದಿದ್ರೆ ಯಾವುದೂ ಕೂಡ ಅಸಾಧ್ಯವಲ್ಲ ಎಂಬುದನ್ನು ನಿರೂಪಿಸಿದ ಮತ್ತೊಬ್ಬ ಸಾಧಕನಾಗಿ ಅದೇ ಪೇಪರ್ ಹುಡುಗ ನಮ್ಮ ಮುಂದಿದ್ದಾನೆ.
3/ 10
ಅವರು ಬೇರೆ ಯಾರೂ ಅಲ್ಲ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು. ಇತ್ತೀಚೆಗೆ ಬಿಡುಗಡೆಯಾದ ಖೇಲ್ರತ್ನ ಪ್ರಶಸ್ತಿ ಪಟ್ಟಿಯಲ್ಲಿ ತಂಗವೇಲು ಹೆಸರು ಮೊದಲು ರಾರಾಜಿಸಿತು. ಕ್ರಿಕೆಟ್ ಅನ್ನು ಮಾತ್ರ ಆರಾಧಿಸುವ ಬಹುಸಂಖ್ಯೆಯ ಭಾರತೀಯರಿಗೆ ತಂಗವೇಲುವಿನ ಪರಿಚಯ ಅಲ್ಲಿಯವರೆಗೂ ಇರಲೇ ಇಲ್ಲ ಎನ್ನಬಹುದು.
4/ 10
ಆದರೆ ಅಲ್ಲಿಂದ ತಂಗವೇಲು ಅವರ ಒಂದೊಂದೇ ಕಹಾನಿಗಳು ಹೊರಬೀಳಲಾರಂಭಿಸಿತು. ಹೌದು ಪ್ರತಿದಿನ ಬೆಳಿಗ್ಗೆ ಎದ್ದು ಮನೆಮನೆಗೆ ದಿನಪತ್ರಿಕೆಗಳನ್ನು ಹಾಕುತ್ತಾ ಬಾಲ್ಯದಲ್ಲಿ ತಂಗವೇಲು ತಮ್ಮ ಕುಟುಂಬ ಸಾಕುತ್ತಿದ್ದರು.
5/ 10
ಆದರೆ ದುರಾದೃಷ್ಟ ಬಸ್ವೊಂದು ಬಲಗಾಲ ಮೇಲೆ ಹರಿದಿದ್ದರಿಂದ ಸಣ್ಣ ವಯಸ್ಸಿನಲ್ಲೇ ತಂಗವೇಲು ವಿಕಲಚೇತನಾಗಿದ್ದರು. ವಿಕಲಚೇತನನಾದರೂ ಅದನ್ನೇ ಅದೃಷ್ಟ ಎಂದುಕೊಂಡ ತಂಗವೇಲು ಹೈಜಂಪ್ನಲ್ಲಿ ಭಾಗವಹಿಸಲು ಶುರು ಮಾಡಿದರು. ಯಾವಾಗ ತಾನೂ ಕೂಡ ಏನಾದರು ಸಾಧಿಸಬೇಕೆಂಬ ಛಲ ಹುಟ್ಟಿತೋ ಅಲ್ಲಿಂದ ಹಿಂತಿರುಗಿ ನೋಡಿಲ್ಲ. ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ 2016 ರಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದರು.
6/ 10
ಅದರಂತೆ ತಮ್ಮ 25ನೇ ವರ್ಷದಲ್ಲಿ ಮರಿಯಪ್ಪನ್ ತಂಗವೇಲು 2016 ರಲ್ಲಿ ರಿಯೋ ಪ್ಯಾರಾಲಿಂಪಿಕ್ನಲ್ಲಿ ಪುರುಷರ ಹೈಜಂಪನ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು. ಇದರ ಬಳಿಕ 2018ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದರು. ಸದ್ಯ ಟೋಕಿಯೋ ಪ್ಯಾರಾಲಿಂಪಿಕ್ಸ್ ಟಿ-42 ಸಿದ್ಧತೆಯಲ್ಲಿರುವ ತಂಗವೇಲು ಸಾಧನೆಗೆ ದೇಶದ ಅತ್ಯುತ್ತನ್ನತ ಕ್ರೀಡಾ ಗೌರವ ಖೇಲ್ ರತ್ನ ಒಲಿದಿದೆ. ಇದರೊಂದಿಗೆ ದೇಶಾದ್ಯಂತ ತಮಿಳು ನಾಡಿನ ಪ್ರತಿಭೆ ಬಗ್ಗೆ ಚರ್ಚೆಗಳು ಶುರುವಾಗಿದೆ.
7/ 10
ನಾನೇನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿರಲಿಲ್ಲ. ಬಾಲ್ಯದಲ್ಲೇ ತಂದೆ ನಮ್ಮನ್ನು ಬಿಟ್ಟುಹೋಗಿದ್ದರು. ಹೀಗಾಗಿ ನಮ್ಮನ್ನು ಸಾಕುವ ಜವಾಬ್ದಾರಿ ತಾಯಿಯ ಹೆಗಲೇರಿತು. ತಾಯಿ ತರಕಾರಿ ವ್ಯಾಪಾರ, ದಿನಗೂಲಿ ಕೆಲಸ ಮಾಡುತ್ತಿದ್ದರು. ನಾನು ಕೂಡ ಕುಟುಂಬಕ್ಕೆ ನೆರವಾಗುವ ಸಲುವಾಗಿ ಬಾಲ್ಯದಲ್ಲೇ ನ್ಯೂಸ್ ಪೇಪರ್ ಹಾಕುವ ಕೆಲಸ ಮಾಡುತ್ತಿದ್ದೆ.
8/ 10
ಪ್ರತಿದಿನ 2 ರಿಂದ 3 ಕಿ.ಮೀ ವರೆಗೆ ನಡೆದುಕೊಂಡು ಹೋಗಿ ಪೇಪರ್ಗಳನ್ನು ಹಾಕುತ್ತಿದ್ದೆ. ಆ ಬಳಿಕ ಕಟ್ಟಡ ಕಾಮಗಾರಿಗೆ ಹೋಗುತ್ತಿದೆ. ಹೀಗೆಲ್ಲಾ ದುಡಿದ್ರೆ ದಿನಕ್ಕೆ 200 ರೂ. ಸಂಬಳ ಸಿಗುತ್ತಿತ್ತು ಎಂದು ತಂಗವೇಲು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
9/ 10
ಈಗ ನನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಸಹೋದರಿಯ ಮದುವೆ ಮಾಡಿದ್ದೇನೆ. ತಮ್ಮ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ನನ್ನ ಹಿಂದಿನ ದಿನಗಳನ್ನು ನೆನೆಸಿಕೊಂಡಾಗ ಈಗಲೂ ರೋಮಾಂಚನವಾಗುತ್ತದೆ. ನಾನು ಇಲ್ಲಿವರೆಗೆ ತಲುಪುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಕಠಿಣ ಪರಿಶ್ರಮ ನನ್ನನ್ನು ಇಂದು ನನಗೆ ಖೇಲ್ ರತ್ನದಂತಹ ಅತ್ಯುನ್ನತ ಗೌರವಕ್ಕೆ ಅರ್ಹನನ್ನಾಗಿಸಿದೆ ಎಂದು ತಂಗವೇಲು ಸಂತಸ ಹಂಚಿಕೊಳ್ಳುತ್ತಾರೆ.
10/ 10
ಕ್ರೀಡಾ ದಿನ ಆಗಸ್ಟ್ 29 ರಂದು ಭಾರತೀಯ ಸರ್ಕಾರ ಮರಿಯಪ್ಪನ್ ತಂಗವೇಲು ಅವರಿಗೆ ಖೇಲ್ ರತ್ನ ಪುರಸ್ಕಾರ ನೀಡಿ ಗೌರವಿಸಲಿದೆ. ಒಟ್ಟಿನಲ್ಲಿ ಸಾಧಿಸಬೇಕೆಂಬ ಛಲವೊಂದಿದ್ರೆ ಏನಾಗಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಇಂದು ಮರಿಯಪ್ಪನ್ ತಂಗವೇಲು ಇಂದು ನಮ್ಮ ಮುಂದಿದ್ದಾರೆ.