ಕಳೆದ ವರ್ಷ ಏಷ್ಯಾಕಪ್‌ಗೂ ಮುನ್ನ ವಿರಾಟ್ ಕೊಹ್ಲಿ ವಿರಾಮ ತೆಗೆದುಕೊಂಡಿದ್ದರು. ಇದೀಗ ಅವರು ಈ ಬಗ್ಗೆ ದೊಡ್ಡ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಜಿಯೋ ಸಿನಿಮಾದಲ್ಲಿ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರೊಂದಿಗೆ ಮಾತನಾಡಿದ ಅವರು, ನಾನು ವಿರಾಮದ ನಂತರ ಹಿಂತಿರುಗುತ್ತಿದ್ದಾಗ ಇದು ನನ್ನ ಸ್ಪರ್ಧಾತ್ಮಕ ಕ್ರಿಕೆಟ್‌ನ ಕೊನೆಯ ತಿಂಗಳು ಎಂದು ನಾನು ಭಾವಿಸಿದ್ದೆ.
ಅಂದರೆ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ದೇವರು ನನಗೆ ಕೊಟ್ಟದ್ದರಲ್ಲಿ ನನಗೆ ಸಂತೋಷವಾಗಿದೆ. ನಾನು ಹತಾಶನಾಗಿರಲಿಲ್ಲ ಎಂದಿದ್ದರು. ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕ ದಾಖಲಿಸಿದರು. 3 ವರ್ಷಗಳ ನಂತರ, ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸುವಲ್ಲಿ ಯಶಸ್ವಿಯಾದರು.
ಕೊರೊನಾದಿಂದಾಗಿ ನಾವು 10 ತಿಂಗಳ ಕಾಲ ಯಾವುದೇ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. 2020ರಲ್ಲಿ ನಾನು ಕೇವಲ 6 ಪಂದ್ಯಗಳನ್ನು ಆಡಿದ್ದೇನೆ. ಇದಾದ ನಂತರವೂ ನನ್ನ ಶತಕದ ಬಗ್ಗೆ ಮಾತ್ರ ಮಾತನಾಡಲಾಗುತ್ತಿತ್ತು. ಆ ಸಮಯದಲ್ಲಿ ಪ್ರತಿ ಪಂದ್ಯದ ನಂತರ ನನ್ನ ಕಳಪೆ ಪ್ರದರ್ಶನದ ಬಗ್ಗೆ ನನ್ನನ್ನು ಕೇಳಲಾಗುತ್ತಿತ್ತು ಎಂದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.