ವಿರಾಟ್ ಕೊಹ್ಲಿ ಅವರ ಕಳಪೆ ಆಟ ಮತ್ತೆ ಮುಂದುವರೆದಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಎರಡು ಇನ್ನಿಂಗ್ಸ್ ಗಳಲ್ಲಿ ನಿರಾಸೆ ಅನುಭವಿಸಿದ್ದರು. ಇದಾದ ಬಳಿಕ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಬಿಡುಗಡೆ ಆಗಿದ್ದು, ಕೊಹ್ಲಿಗೆ ಬಿಗ್ ಶಾಕ್ ಉಂಟಾಗಿದೆ. ಅಲ್ಲದೇ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಕೊಹ್ಲಿ ಶತಕ ಸಿಡಿಸಿ ಸುಮಾರು ಮೂರು ವರ್ಷಗಳಾಗಿವೆ.
ಭಾರತದ ವಿಕೆಟ್ ಕೀಪರ್ ರಿಷಭ ಪಂತ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಎಡ್ಜ್ಬಾಸ್ಟನ್ನಲ್ಲಿ ನಡೆದ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಪಂತ್ ಉತ್ತಮ ಪ್ರದರ್ಶನ ನೀಡಿದರು. ಪಂತ್ ತಮ್ಮ ಕೊನೆಯ ಆರು ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಎರಡು ಶತಕ ಮತ್ತು ಮೂರು ಅರ್ಧ ಶತಕ ಸಿಡಿಸಿದ್ದಾರೆ. ಇದೇ ಕಾರಣದಿಂದ ಅವರು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್ನಲ್ಲಿರುವ ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೈರ್ಸ್ಟೋವ್ 10ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ 32ರ ಹರೆಯದ ಬೇರ್ ಸ್ಟೋ ಶತಕ ಸಿಡಿಸಿದ್ದು ಗೊತ್ತೇ ಇದೆ. ಭಾರತದ ವಿರುದ್ಧದ ಟೆಸ್ಟ್ ನಲ್ಲೂ ಅದೇ ಫಾರ್ಮ್ ಮೂಲಕ ಇಂಗ್ಲೆಂಡ್ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.