ದುಬೈನಲ್ಲಿ ಹೊಸ ವರ್ಷಾಚರಣೆ ಮುಗಿಸಿ ಭಾರತಕ್ಕೆ ಮರಳಿದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಹಾಗೂ ಮಗಳೊಂದಿಗೆ ನೇರವಾಗಿ ವೃಂದಾವನಕ್ಕೆ ಆಗಮಿಸಿದ್ದರು. ಇಲ್ಲಿ ಬಾಬಾ ನೀಮ್ ಕರೌಲಿಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಒಂದು ಗಂಟೆ ಧ್ಯಾನವನ್ನೂ ಮಾಡಿದ್ದರು. ಈ ದಂಪತಿ ಬಾಬಾ ನೀಮ್ ಕರೌಲಿಯ ಅನುಯಾಯಿಗಳು. ಈ ಹಿಂದೆ ವಿರಾಟ್-ಅನುಷ್ಕಾ ಕೂಡ ನೈನಿತಾಲ್‌ನಲ್ಲಿರುವ ಬಾಬಾ ನೀಮ್ ಕರೌಲಿಯ ಕೈಂಚಿ ಧಾಮಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು.
ವಿರಾಟ್ ಇದೀಗ ರಿಷಿಕೇಶದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗುರು ಸ್ವಾಮಿ ದಯಾನಂದ ಗಿರಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. 2015ರಲ್ಲಿ ಪ್ರಧಾನಿ ಮೋದಿಯವರು ಸ್ವಾಮಿ ದಯಾನಂದ ಗಿರಿಯವರ ಆಶ್ರಮಕ್ಕೆ ಆಗಮಿಸಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಅವರ ಆಶ್ರಮಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಉದ್ದೇಶದಿಂದ ವಿರಾಟ್ ಆಗಮಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಿರಾಟ್ ಇಲ್ಲಿನ ಬ್ರಹ್ಮಲಿನ್ ದಯಾನಂದ ಸರಸ್ವತಿಯ ಸಮಾಧಿಗೆ ಭೇಟಿ ನೀಡಿ ಗಂಗಾ ಆರತಿಯಲ್ಲಿ ಪಾಲ್ಗೊಂಡರು.
ಏಷ್ಯಾಕಪ್‌ಗೂ ಮುನ್ನ ಕೊಹ್ಲಿ ಕ್ರಿಕೆಟ್‌ನಿಂದ ಸುದೀರ್ಘ ವಿರಾಮ ತೆಗೆದುಕೊಂಡಿದ್ದರು. ಈ ಸಮಯದಲ್ಲಿ ಅವರು ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡಿದ್ದರಂತೆ. ಬಳಿಕ ಅವರು ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ 3 ವರ್ಷಗಳ ಬರವನ್ನು ಕೊನೆಗೊಳಿಸಿದರು. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ಟಾಪ್ ಸ್ಕೋರರ್ ಆಗಿದ್ದರು.