ಹಾರ್ದಿಕ್ ಪಾಂಡ್ಯ ನಾಯಕನಾಗಿ ಮತ್ತೊಂದು ಸರಣಿ ಗೆದ್ದಿದ್ದಾರೆ. 3 ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೀಲಂಕಾವನ್ನು 2-1 ಅಂತರದಿಂದ ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಶನಿವಾರ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡ 91 ರನ್ಗಳ ಜಯ ಸಾಧಿಸಿತ್ತು. ಸೂರ್ಯಕುಮಾರ್ ಯಾದವ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತ್ತು. ಉತ್ತರವಾಗಿ ಶ್ರೀಲಂಕಾ ತಂಡ 137 ರನ್ ಗಳಿಸಿ ಸೋಲುಂಡಿತ್ತು. ಪಂದ್ಯದಲ್ಲಿ ಎಡಗೈ ವೇಗದ ಬೌಲರ್ ಅರ್ಷ್ದೀಪ್ ಸಿಂಗ್ 3 ವಿಕೆಟ್ ಪಡೆದುಕೊಂಡು ಮಿಂಚಿದ್ದರು.
ಐಪಿಎಲ್ 2022ರ ಬಳಿಕ ಪಾಂಡ್ಯ ಮೊದಲ ಬಾರಿಗೆ ಟೀಂ ಇಂಡಿಯಾ ಟಿ20 ನಾಯಕ ಜವಾಬ್ದಾರಿ ವಹಿಸಿಕೊಂಡಿದ್ದರು. ಹೊಸ ತಂಡವಾಗಿ ಐಪಿಎಲ್ ಟೂರ್ನಿಗೆ ಎಂಟ್ರಿ ಕೊಟ್ಟಿದ್ದ ಗುಜರಾತ್ ಟೈಟಾನ್ಸ್, ಹಾರ್ದಿಕ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಬಳಿಕ ಹಾರ್ದಿಕ್ ಅವರಿಗೆ ಟೀಂ ಇಂಡಿಯಾದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಕ್ತು ಅಂತ ಹೇಳಬಹುದು. ಇತ್ತೀಚೆಗೆ, ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ತೋರಿದ ನಂತರ, ಮಾಜಿ ಆಟಗಾರರಾದ ಸುನೀಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ, ಹಾರ್ದಿಕ್ರನ್ನು ಟಿ20 ತಂಡದ ನಾಯಕನಾಗಿ ಮಾಡುವ ಬಗ್ಗೆ ಸಲಹೆ ನೀಡಿದ್ದರು.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಇದುವರೆಗೆ ಟೀಂ ಇಂಡಿಯಾ ಒಂದೇ ಒಂದು ಟಿ20 ಸರಣಿಯಲ್ಲಿ ಸೋಲುಂಡಿಲ್ಲ. ಶ್ರೀಲಂಕಾ ಸರಣಿಗೂ ಮುನ್ನ ಟೀಂ ಇಂಡಿಯಾ, ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ 2-0 ಜಯ ಸಾಧಿಸಿತ್ತು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು 1-0 ಅಂತರದಲ್ಲಿ ಗೆಲ್ಲುವಲ್ಲಿ ಕ್ಯಾಪ್ಟನ್ ಪಾಂಡ್ಯ ಯಶಸ್ವಿಯಾದರು. ಇದೀಗ ಶ್ರೀಲಂಕಾ ವಿರುದ್ಧದ ಸರಣಿಯನ್ನು 2-1 ಅಂತರದಿಂದ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲೂ ಹಾರ್ದಿಕ್, ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ಪಡೆದಿತ್ತು.
ಇದರೊಂದಿಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ಟಿ20 ಲೀಗ್ ಐಪಿಎಲ್ ಪ್ರಶಸ್ತಿ ಗೆದ್ದಿದ್ದಲ್ಲದೆ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4 ತಂಡಗಳನ್ನು ಸೋಲಿಸಿ ಸಾಧನೆಯನ್ನು ಮಾಡಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಇದೇ ತಿಂಗಳು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಬಿಸಿಸಿಐ ಮೂಲಗಳ ಅನ್ವಯ, ಈ ಸರಣಿಗೂ ಟೀಂ ಇಂಡಿಯಾದ ಹಿರಿಯ ಆಟಗಾರರೂ ಹೊರಗುಳಿಯಲಿದ್ದು, ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ತಂಡ ಸರಣಿಗೆ ಆಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಳಿದಂತೆ ಜ.10 ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡದ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಲಂಕಾ ಸರಣಿಗೂ ಮುನ್ನ ಕೆಎಲ್ ರಾಹುಲ್ ಟೀಂ ಇಂಡಿಯಾದ ಉಪನಾಯಕರಾಗಿದ್ದರು. ಆದರೆ ಕಳಪೆ ಪ್ರದರ್ಶನದಿಂದ ರಾಹುಲ್ ರೇಸ್ ನಿಂದ ಹೊರಗುಳಿದಿದ್ದಾರೆ. ಈ ವರ್ಷ ಏಕದಿನ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಈಗಿನಿಂದಲೇ ಟೂರ್ನಿಗೆ ತಯಾರಿ ನಡೆಸಿದೆ.
ಇನ್ನು, ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಕ್ರಮವಾಗಿ 29, 12 ಮತ್ತು 4 ರನ್ ಗಳಿಸಿದ್ದರು. ಬೌಲಿಂಗ್ನಲ್ಲಿ 2 ವಿಕೆಟ್ ಕೂಡ ಪಡೆದುಕೊಂಡಿದ್ದರು. ಇದುವರೆಗೂ 84 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪಾಂಡ್ಯ, 1205 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧ ಶತಕಗಳೂ ಸೇರಿದೆ. 144ರ ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದು, ಬೌಲಿಂಗ್ನಲ್ಲಿ 64 ವಿಕೆಟ್ ಪಡೆದುಕೊಂಡಿದ್ದಾರೆ. ಟಿ20 ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ ಒಟ್ಟಾರೆ 15 ಅರ್ಧಶತಕಗಳೊಂದಿಗೆ 3936 ರನ್ ಗಳಿಸಿ 140 ವಿಕೆಟ್ ಪಡೆದಿದ್ದಾರೆ.
29ರ ವರ್ಷದ ಹಾರ್ದಿಕ್ ಪಾಂಡ್ಯ, ಇದುವರೆಗೂ 66 ಏಕದಿನ ಪಂದ್ಯಗಳಲ್ಲಿ 34ರ ಸರಾಸರಿಯೊಂದಿಗೆ 1386 ರನ್ ಗಳಿಸಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸೇರಿದ್ದು, ಅಜೇಯ 92 ರನ್ ಅವರ ಬೆಸ್ಟ್ ಸ್ಕೋರ್ ಆಗಿದೆ. 39ರ ಸರಾಸರಿಯಲ್ಲಿ 63 ವಿಕೆಟ್ಗಳನ್ನು ಪಡೆದುಕೊಂಡಿದ್ದು, 24 ರನ್ಗೆ 4 ವಿಕೆಟ್ ಪಡೆದದ್ದು ಬೆಸ್ಟ್ ಬೌಲಿಂಗ್ ಪ್ರದರ್ಶನವಾಗಿದೆ. ಗಾಯದ ಸಮಸ್ಯೆಯಿಂದ ಕಮ್ಬ್ಯಾಕ್ ಮಾಡಿರುವ ಪಾಂಡ್ಯ, ಏಕದಿನ ಪಂದ್ಯಗಳಲ್ಲಿ 10 ಓವರ್ಗಳ ಸ್ಪೆಲ್ ಮಾಡಲು ಎಷ್ಟು ಫಿಟ್ ಆಗಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.