ಆಂಕಲ್ ಹೋಲ್ಡ್ (Ankle Hold): ಇದು ಕಬಡ್ಡಿಯಲ್ಲಿ ರಕ್ಷಣಾ ಆಟಗಾರರು ಸಾಮಾನ್ಯವಾಗಿ ಬಳಸುವ ತಂತ್ರ. ಆದರೆ, ರೇಡರ್ ಪಾಲಿಗೆ ಇದು ಸದಾ ಸಿಂಹಸ್ವಪ್ನ. ಆಂಕಲ್ ಎಂದರೆ ಕಣಕಾಲು. ಅಂದರೆ ಹಿಮ್ಮಡಿಯ ಗಂಟು ಅಥವಾ ಪಾದದ ಕೀಲು. ರೇಡರ್ ಸಾಮಾನ್ಯವಾಗಿ ಕಾರ್ನರ್ ಬಳಿ ಹೋಗಿ ಡಿಫೆಂಡರ್ಗಳ ಪಾದ ತುಳಿದು ಪಾಯಿಂಟ್ ಪಡೆಯಲು ಅಥವಾ ಬೋನಸ್ ಗೆರೆ ಸ್ಪರ್ಶಿಸಿ ಪಾಯಿಂಟ್ ಪಡೆಯಲು ಪ್ರಯತ್ನಿಸುತ್ತಾರೆ. ಆಗ ಸಮಯ ನೋಡಿ ರೇಡರ್ ನ ಪಾದವನ್ನ ಡಿಫೆಂಡರ್ ವೊಬ್ಬ ಹಿಡಿಯುತ್ತಾರೆ. ಇದು ನೋಡಲು ಸುಲಭ ಎನಿಸಿದರೂ ಸ್ವಲ್ಪ ಎಚ್ಚರ ತಪ್ಪಿದರೂ ರೇಡರ್ ಸುಲಭವಾಗಿ ತಪ್ಪಿಸಿಕೊಳ್ಳಬಹುದು. ರೇಡರ್ನ ಪಾದವನ್ನು ಸರಿಯಾಗಿ ಹಿಡಿದುಕೊಂಡರೆ ತಪ್ಪಿಸಿಕೊಳ್ಳುವುದು ಕಷ್ಟ. ರೇಡರ್ನ ಪಾದ ಹಿಡಿದ ಕೂಡ ಇತರ ರಕ್ಷಣಾ ಆಟಗಾರರು ರೇಡರ್ ಮೇಲೆ ಮುಗಿಬಿದ್ದು ನಿಲ್ಲಿಸಬಹುದು.
ಬ್ಲಾಕ್ (Block): ರೇಡರ್ ವಾಪಸ್ ಹೋಗದಂತೆ ರಕ್ಷಣಾ ಆಟಗಾರರು ತಡೆಯುವುದು ಬ್ಲಾಕ್ ಟೆಕ್ನಿಕ್. ಇದು ಸಂಪೂರ್ಣ ಟೀಮ್ ವರ್ಕ್. ರಕ್ಷಣಾ ಆಟಗಾರನ ಬಲ ಹಾಗೂ ಟೈಮಿಂಗ್ ಬಹಳ ಮುಖ್ಯ. ರಕ್ಷಣಾ ಆಟಗಾರರು ಅಡ್ಡವಾಗಿ ಬಂದಾಗ ರೇಡರ್ ಡುಬ್ಕಿ ಮಾಡಿ ನುಸುಳಿ ಹೋಗಬಹುದು, ಅಥವಾ ಫ್ರಾಗ್ ಜಂಪ್ ಮಾಡಿ ಜಿಗಿದು ಹೋಗಬಹುದು. ಇದೆಲ್ಲವನ್ನೂ ಮನಸ್ಸಲ್ಲಿಟ್ಟುಕೊಂಡು ರಕ್ಷಣಾ ಆಟಗಾರರು ರೇಡರ್ ನನ್ನು ಬಲವಾಗಿ ಹಿಡಿದು ನೆಲಕ್ಕುರುಳಿಸಿ ತಡೆಯಬೇಕು.
ಚೈನ್ ಟ್ಯಾಕಲ್ (Chain Tackle): ಇದು ಕಬಡ್ಡಿಯ ಸರ್ವೇಸಾಮಾನ್ಯ ರಕ್ಷಣಾ ತಂತ್ರ. ಸಾಮಾನ್ಯವಾಗಿ ಇಬ್ಬರು ಅಥವಾ ಮೂರು ಆಟಗಾರರು ಸರಪಳಿ ರೀತಿಯಲ್ಲಿ ಪರಸ್ಪರ ಕೈಹಿಡಿದು ನಿಂತಿರುತ್ತಾರೆ. ರೇಡರ್ ಬಂದಾಗ ಆತನನ್ನು ಸುತ್ತುವರಿದು ಬಂಧಿಸುತ್ತಾರೆ. ರೇಡರ್ ಮೇಲೆ ಒಬ್ಬನೇ ಹಿಡಿಯಲು ಪ್ರಯತ್ನಿಸುವ ಬದಲು ಇಬ್ಬರು ಮೂವರು ಸೇರಿಕೊಂಡು ಸರಪಳಿ ರೀತಿಯಲ್ಲಿ ಹಿಡಿಯುವುದು ಸುಲಭ. ಕಬಡ್ಡಿಯಲ್ಲಿ ಬಹಳ ಸಾಮಾನ್ಯವಾಗಿ ಬಳಸುವ ವಿದ್ಯೆ ಇದು.
ಡ್ಯಾಷ್ (Dash): ಡಿಕ್ಕಿ ಹೊಡೆದೋ ಅಥವಾ ನೂಕಿಯೋ ರೇಡರ್ ನನ್ನು ಬೌಂಡರಿ ಗೆರೆ ಆಚೆ ತಳ್ಳುವುದು ಡ್ಯಾಷ್ ಕಲೆ. ರೇಡರ್ ರಕ್ಷಣಾ ಅಂಗಣ ಒಳಕ್ಕೆ ಬಂದು ಹಾಫ್ ಲೈನ್ ನತ್ತ ವಾಪಸ್ ಹೋಗುತ್ತಿದ್ದಾಗ ಸರಿಯಾದ ಸಂದರ್ಭ ನೋಡಿ ಆತನನ್ನು ಬಲವಾಗಿ ಸೈಡ್ ಲೈನ್ ನ ಆಚೆ ನೂಕಲಾಗುತ್ತದೆ. ಇದಕ್ಕೆ ಕೇವಲ ಬಲ ಇದ್ದರಷ್ಟೇ ಸಾಲದು, ಸರಿಯಾದ ಟೈಮಿಂಗ್, ಸರಿಯಾದ ವೇಗ ಸರಿಯಾದ ಟೆಕ್ನಿಕ್ ಗೊತ್ತಿರಬೇಕು. ಇಲ್ಲದಿದ್ದರೆ ರೇಡರ್ ಸುಲಭವಾಗಿ ತಪ್ಪಿಸಿಕೊಂಡು ಮಧ್ಯದ ಗೆರೆ ಮುಟ್ಟಿಬಿಡಬಹುದು.