ಈ ರಾಜಕೀಯದಲ್ಲಿ ಮತ್ತು ಸರ್ಕಾರದ ಆಡಳಿತ ವಿಭಾಗದಲ್ಲಿರುವ ಉನ್ನತ ಹುದ್ದೆಯಲ್ಲಿರುವವರಿಗೆ ರಾಜಕೀಯವನ್ನು ಮತ್ತು ಆಡಳಿತವನ್ನು ಹೊರತುಪಡಿಸಿ ಅವರ ನೆಚ್ಚಿನ ವಿಷಯಗಳ ಕಡೆಗೆ ಒಲುವು ತೋರಿಸಲು ಸ್ವಲ್ಪವೂ ಸಮಯವಿರುವುದಿಲ್ಲ. ಆದರೆ ಕೆಲವರು ಮಾತ್ರ ತಮ್ಮ ಎಂತಹದೇ ಬ್ಯುಸಿ ಕೆಲಸದಿಂದ ಸ್ವಲ್ಪ ಬಿಡುವು ಸಿಕ್ಕರೆ ಸಾಕು, ಕ್ರಿಕೆಟ್ ಆಟವನ್ನು, ಫುಟ್‌ಬಾಲ್ ಆಟವನ್ನು ನೋಡುವ ಮತ್ತು ಅವರ ನೆಚ್ಚಿನ ಆಟಗಾರರ ಅಭಿಮಾನಿಗಳಾಗಿರುವುದನ್ನು ನಾವು ನೋಡುತ್ತೇವೆ.
ಇಲ್ಲಿಯೂ ಸಹ ಇಂತಹದೇ ಒಂದು ಉದಾಹರಣೆ ಇದೆ ನೋಡಿ. ನಮ್ಮ ದೇಶದ ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಸುಬ್ರಮಣ್ಯಂ ಜೈಶಂಕರ್ ಅವರ ಹೆಸರನ್ನು ಬಹುತೇಕರು ಪ್ರತಿದಿನ ಟಿವಿಯಲ್ಲಿ ಮತ್ತು ದಿನಪತ್ರಿಕೆಯಲ್ಲಿ ನೋಡುತ್ತಲೇ ಇರುತ್ತೇವೆ. ಇವರು ವಿಶ್ವದ ಅತ್ಯುತ್ತಮ ರಾಜತಾಂತ್ರಿಕರಲ್ಲಿ ಒಬ್ಬರು. ಅವರು ತಮ್ಮ ಕೌಶಲ್ಯಯುತ ರಾಜತಾಂತ್ರಿಕತೆ, ಕಠಿಣ ಸಮಾಲೋಚನಾ ತಂತ್ರಗಳು ಮತ್ತು ಕಾರ್ಯತಂತ್ರದ ದೃಷ್ಟಿಕೋನಕ್ಕಾಗಿ ತುಂಬಾನೇ ಜನಪ್ರಿಯರಾಗಿದ್ದಾರೆ.
ಕ್ರಿಕೆಟ್ ಆಟದ ದೊಡ್ಡ ಅಭಿಮಾನಿಯಂತೆ ಈ ಸಚಿವರು: ಬಹುತೇಕ ಭಾರತೀಯರಂತೆ, ಸುಬ್ರಮಣ್ಯಂ ಜೈಶಂಕರ್ ಅವರು ಕೂಡ ಕಟ್ಟಾ ಕ್ರಿಕೆಟ್ ಅಭಿಮಾನಿಯಂತೆ. ಅವರ ಕ್ರಿಕೆಟ್ ಚಾತುರ್ಯ ಅದ್ಭುತವಾಗಿದೆ ಅಂತಾರೆ ಅವರನ್ನು ತುಂಬಾನೇ ಹತ್ತಿರದಿಂದ ಬಲ್ಲವರು. ಕ್ರಿಕೆಟ್‌ನ ಅವರ ಅದ್ಭುತ ಸಾದೃಶ್ಯವು ಇತ್ತೀಚೆಗೆ ಅನೇಕ ತಜ್ಞರನ್ನು ಆಕರ್ಷಿಸುತ್ತಿದೆ ನೋಡಿ. ಇದಲ್ಲದೆ, ಅವರು ತಮ್ಮ ಕೆಲಸಗಳಲ್ಲಿ ಅನೇಕ ಸಂಕೀರ್ಣ ಸಮಸ್ಯೆಗಳನ್ನು ಇತರರಿಗೆ ಮತ್ತು ತಮ್ಮ ಸಹೋದ್ಯೋಗಿಗಳಿಗೆ ಸರಳವಾಗಿ ವಿವರಿಸಲು ಅವರು ಆಗಾಗ ಕ್ರಿಕೆಟ್ ವಿಷಯಗಳನ್ನು ರೂಪಕಗಳಾಗಿ ಬಳಸುತ್ತಾರೆ.
ಜೈಶಂಕರ್ ಅವರಿಗೆ ಭಾರತ ಕ್ರಿಕೆಟ್ ನ ಮಾಜಿ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ ಮತ್ತು ಜೇಮ್ಸ್ ಆಂಡರ್ಸನ್ ಅಂದ್ರೆ ತುಂಬಾನೇ ಇಷ್ಟವಂತೆ ಮತ್ತು ಇವರು ಜೈಶಂಕರ್ ಅವರ ನೆಚ್ಚಿನ ಕ್ರಿಕೆಟಿಗರಂತೆ ಎಂದು ಖುದ್ದು ವಿದೇಶಾಂಗ ವ್ಯವಹಾರಗಳ ಸಚಿವರೇ ಹೇಳಿಕೊಂಡಿದ್ದಾರೆ. ಈ ಮೂವರು ಆಟಗಾರರು ಜೈಶಂಕರ್ ಅವರಿಗೆ ಆಕ್ರಮಣಕಾರಿ ಕೌಶಲ್ಯಗಳು, ಆಟಗಾರರ ಶಾಂತತೆ ಮತ್ತು ಸಹಿಷ್ಣುತೆಯಿಂದಾಗಿ ಇಷ್ಟವಾಗಿದ್ದಾರಂತೆ ಅಂತ ಹೇಳಿಕೊಂಡಿದ್ದಾರೆ.
"ಸೆಹ್ವಾಗ್ ಅವರ ಆಕ್ರಮಣಕಾರಿ ಪ್ರವೃತ್ತಿಯಿಂದಾಗಿ ನಾನು ಅವರನ್ನು ಇಷ್ಟಪಡುತ್ತೇನೆ. ಅವರು ಆಟವನ್ನು ಎದುರಾಳಿಗಳ ಕೈಯಿಂದ ಕಸಿದುಕೊಳ್ಳುತ್ತಾರೆ. ನಾನು ಧೋನಿಯನ್ನು ಇಷ್ಟಪಡುತ್ತೇನೆ ಏಕೆಂದರೆ ಅವರು ಯಾವಾಗಲೂ ಆಟದ ಕೊನೆಯ ಎಸೆತದವರೆಗೆ ಕಾರ್ಯತಂತ್ರ ರೂಪಿಸುತ್ತಾರೆ. ಒತ್ತಡದಲ್ಲಿ ಹೇಗೆ ಒಬ್ಬ ನಾಯಕ ಕೂಲ್ ಆಗಿರಬೇಕು ಎಂದು ಅವರಿಂದ ತಿಳಿದುಕೊಳ್ಳಬೇಕು" ಎಂದು ಅವರು ಹೇಳಿದರು.
ಇನ್ನೂ ಮೂರನೇ ಆಟಗಾರ ಇಂಗ್ಲೆಂಡ್ ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ತುಂಬಾನೇ ಇಷ್ಟವಂತೆ, ಏಕೆಂದರೆ ಜೇಮ್ಸ್ ಅವರಲ್ಲಿನ ಸಹಿಷ್ಣುತೆ ಮತ್ತು ಫಿಟ್ನೆಸ್ ಅನ್ನು ಕೇಂದ್ರ ಸಚಿವರು ತುಂಬಾನೇ ಶ್ಲಾಘಿಸಿದರು. "40ನೇ ವಯಸ್ಸಿನಲ್ಲಿಯೂ ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ವೇಗದ ಬೌಲರ್ ಆಗಿ ಮುಂದುವರೆದಿರುವುದು ನಿಜವಾಗಿಯೂ ಕಠಿಣವಾದ ಸವಾಲು. ಇದು ನನಗೆ ಪರಿಶ್ರಮ, ಸಹಿಷ್ಣುತೆ ಮತ್ತು ಫಿಟ್ನೆಸ್ ಎಷ್ಟು ಮುಖ್ಯ ಅನ್ನೋದನ್ನು ತಿಳಿಸಿಕೊಡುತ್ತದೆ" ಎಂದು ಜೈಶಂಕರ್ ಹೇಳಿದರು.